Content-Length: 90390 | pFad | https://kn.wikipedia.org/wiki/%E0%B2%A6%E0%B2%B0%E0%B3%8D%E0%B2%AC%E0%B2%BE%E0%B2%B0%E0%B3%81

ದರ್ಬಾರು - ವಿಕಿಪೀಡಿಯ ವಿಷಯಕ್ಕೆ ಹೋಗು

ದರ್ಬಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಾಠರ ದರ್ಬಾರು

ದರ್ಬಾರು ಅನೇಕ ದಕ್ಷಿಣ ಏಷ್ಯಾದ ಭಾಷೆಗಳಲ್ಲಿ ಸಾಮಾನ್ಯವಾದ ಶಬ್ದವಾಗಿದೆ. ಇದು ಭಾರತೀಯ ರಾಜರು ಮತ್ತು ಇತರ ಆಡಳಿತಗಾರರು ತಮ್ಮ ಔಪಚಾರಿಕ ಮತ್ತು ಅನೌಪಚಾರಿಕ ಸಭೆಗಳನ್ನು ನಡೆಸುವ ಸ್ಥಳಕ್ಕೆ ಬಳಸಲಾದ ಶಬ್ದವಾಗಿತ್ತು, ಅಂದರೆ ರಾಜನ ಆಸ್ಥಾನಕ್ಕೆ ಸಮಾನವಾದ ಪದವಾಗಿತ್ತು. ದರ್ಬಾರು ಪದ ಪರ್ಷಿಯನ್ ಭಾಷೆಯಿಂದ ಹುಟ್ಟಿಕೊಂಡಿದೆ. ಇದರರ್ಥ ರಾಜನು ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಚರ್ಚೆಗಳನ್ನು ನಡೆಸುತ್ತಿದ್ದ ಔಪಚಾರಿಕ ಸಭೆ. ನಂತರ ಈ ಪದವನ್ನು ಅರಸನ ಆಸ್ಥಾನ ಅಥವಾ ಊಳಿಗಮಾನ್ಯ ತೆರಿಗೆಗೆ ಬಳಸಲಾಗಿತ್ತು ಏಕೆಂದರೆ ನಂತರ ರಾಜ್ಯಗಳು ವಿದೇಶಿಯರಿಂದ ಆಳಲ್ಪಟ್ಟವು. ದರ್ಬಾರು ದೇಶಿ ರಾಜ್ಯದ ವ್ಯವಹಾರಗಳನ್ನು/ಅಧಿಕಾರಗಳನ್ನು ನಿರ್ವಹಿಸುವ ಊಳಿಗಮಾನ್ಯ ರಾಜ್ಯ ಪರಿಷತ್ತು ಅಥವಾ ಸಂಪೂರ್ಣವಾಗಿ ವಿಧ್ಯುಕ್ತ ಸಭೆಯಾಗಿರಬಹುದು, ಉದಾಹರಣೆಗೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಮಯದಲ್ಲಿ.

ಅತ್ಯಂತ ಪ್ರಸಿದ್ಧ ದರ್ಬಾರುಗಳು ಮಹಾನ್ ಸಾಮ್ರಾಟರು ಮತ್ತು ರಾಜರಿಗೆ ಸೇರಿದ್ದವು. ಉತ್ತರದಲ್ಲಿ, ಉದಯಪುರ, ಜೈಪುರ, ಜೋಧ್‍ಪುರ್, ಜೈಸಲ್ಮೇರ್, ಮತ್ತು ಆಗ್ರಾದಂತಹ ನಗರಗಳು ಇಂತಹ ಭವ್ಯವಾದ ಸಭಾಂಗಣಗಳಿಂದ ಅಲಂಕೃತವಾದ ಅರಮನೆಗಳನ್ನು ಹೊಂದಿವೆ. ಮುಘಲ್ ಸಾಮ್ರಾಟ ಅಕ್ಬರ್ ಎರಡು ಸಭಾಂಗಣಗಳನ್ನು ಹೊಂದಿದ್ದನು; ಒಂದು ತನ್ನ ಮಂತ್ರಿಗಳಿಗಾಗಿ ಮತ್ತು ಇನ್ನೊಂದು ಸಾರ್ವಜನಿಕರಿಗಾಗಿ. ಸಾಮಾನ್ಯವಾಗಿ ದರ್ಬಾರು ಸಭಾಂಗಣಗಳು ಆ ಕಾಲದಲ್ಲಿ ಲಭ್ಯವಾದ ಸಾಧ್ಯವಾದಷ್ಟು ಅತ್ಯುತ್ತಮ ಸಾಮಗ್ರಿಗಳಿಂದ ಅದ್ದೂರಿಯಾಗಿ ಅಲಂಕೃತವಾಗಿರುತ್ತವೆ. ಭಾರತದ ದಕ್ಷಿಣದಲ್ಲಿ, ಮೈಸೂರು ಅರಮನೆಯು ಇಂತಹ ಅನೇಕ ಸಭಾಂಗಣಗಳನ್ನು ಹೊಂದಿರ್ರು, ವಿಶೇಷವಾಗಿ ವಿವಾಹ ಸಮಾರಂಭಗಳಿಗೆ ಬಳಸಲ್ಪಡುತ್ತಿದ್ದ ನವಿಲು ಸಭಾಂಗಣವು ಬೆಲ್ಜಿಯಮ್‍ನಿಂದ ಆಮದು ಮಾಡಿಕೊಂಡ ಬಣ್ಣದ ಗಾಜುಗಳನ್ನು ಹೊಂದಿತ್ತು. ಆಂಧ್ರ ಪ್ರದೇಶದ ಹೈದರಾಬಾದ್ ನಗರದಲ್ಲಿನ ಖಿಲಾವತ್ ಮುಬಾರಕ್‍ನಲ್ಲಿನ ದರ್ಬಾರು ಸಭಾಂಗಣವು ಹೈದರಾಬಾದ್‍ನ ನಿಜ಼ಾಮರ ದರ್ಬಾರು ಸಭಾಂಗಣವಾಗಿತ್ತು. ರಾಷ್ಟ್ರಪತಿ ಭವನದ ಮುಖ್ಯ ಪ್ರಾಸಾದದ ಕೆಳಗೆ ಭವ್ಯ ದರ್ಬಾರ್ ಹಾಲ್ ಇದೆ. ಇಲ್ಲಿ ಭಾರತದ ರಾಷ್ಟ್ರಪತಿಗಳ ಅಧ್ಯಕ್ಷತೆಯಲ್ಲಿ ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಿಂದ ಹೆಚ್ಚಿನ ಮಾಹಿತಿ

[ಬದಲಾಯಿಸಿ]
ಮೈಸೂರಿನ ಅಂಬಾವಿಲಾಸ ಅರಮನೆಯ ದರ್ಬಾರು ಮಂಟಪ

ಒಡ್ಡೋಲಗ: ರಾಜನಾದವನು ಸಿಂಹಾಸನವನ್ನೇರಿ ಸಮಸ್ತ ಪ್ರಜಾ ಸಮೂಹಕ್ಕೆ ದರ್ಶನ ಕೊಡುವ ಮಹಾಸಭೆಗೆ ಈ ಹೆಸರಿದೆ. ಓಲಗವೆಂದರೆ ರಾಜಸಭೆ. ಒಡ್ಡು ಎಂಬ ಮಾತಿಗೆ ವಿಶಾಲವಾದದ್ದು, ಬಾಹುಳ್ಯವುಳ್ಳದ್ದು ಎಂಬ ಅರ್ಥ ಕನ್ನಡದಲ್ಲಿಯೂ ತೆಲುಗಿನಲ್ಲಿಯೂ ಇದೆ. ಪೇರೋಲಗಮು, ಒಡ್ಡೋಲಗಮು ಎಂಬ ಮಾತುಗಳನ್ನು ತೆಲುಗಿನ ಆದಿಕವಿಯಾದ ನನ್ನಯನೇ ಉಪಯೋಗಿಸಿದ್ದಾನೆ. ಸಭಾ ಮಂಟಪದೊಳೊಡ್ಡೋಲಗಂಗೊಟ್ಟು-ಎಂದು ಪಂಪ ಒಂದೆಡೆ ಹೇಳುತ್ತಾನೆ. ಸಭೆ ಸೇರುವುದಕ್ಕೆಂದೇ ಏರ್ಪಟ್ಟಿರುವ ವಿಶಾಲವಾದ ಭವನದಲ್ಲಿ ದೊರೆ ಪರಿವಾರ ಸಮೇತನಾಗಿ ಸೇರುವ ಸನ್ನಿವೇಶವೇ ಒಡ್ಡೋಲಗ. ಕನ್ನಡ ಕಾವ್ಯ ಹಾಗೂ ಚರಿತ್ರೆಗಳಲ್ಲಿ ನಿರೂಪಣೆಗೊಂಡಿರುವ ಒಡ್ಡೋಲಗಗಳ ಪ್ರಧಾನಾಂಶಗಳ ಆಧಾರದ ಮೇಲೆ ಅದರ ಸಾಮಾನ್ಯ ವರ್ಣನೆಯನ್ನಿಲ್ಲಿ ಕೊಡಲಾಗಿದೆ.

ಒಡ್ಡೋಲಗದಲ್ಲಿ ಮಂತ್ರಿಗಳು ದಂಡನಾಯಕರು ಎಲ್ಲ ಬಂದಿರುತ್ತಾರಾದರೂ ಅಲ್ಲಿ ಮಂತ್ರಾಲೋಚನೆಯೇನೂ ನಡೆಯುವುದಿಲ್ಲ. ಮಂತಣಸಾಲೆ ಬೇರೆ. ಅದು ಹೆಚ್ಚು ರಹಸ್ಯವಾದ ಮಂದಿರ. ಅಲ್ಲಿ ರಾಜ ಬಯಸಿದವರಿಗೆ ಮಾತ್ರ ಪ್ರವೇಶ. ಓಲಗದಲ್ಲಿದ್ದು ರಾಜಸೇವೆ ಮಾಡುವವನನ್ನು ಓಲಗಕಾರನೆಂದು ಕರೆಯುವುದುಂಟು. ಓಲಗಿಸು, ಓಲಯಿಸು ಎಂಬ ಮಾತುಗಳು ರಾಜನನ್ನು ಆಶ್ರಯಿಸಿಕೊಂಡಿರುವವರು ಅವನ ಒಲವನ್ನು ಗಳಿಸಿಕೊಳ್ಳಲು ಅವನ ಸಾಮೀಪ್ಯದಲ್ಲಿದ್ದುಕೊಂಡು ಸೇವಿಸುವುದು ಎಂಬ ಅರ್ಥವನ್ನು ಕೊಡುತ್ತವೆ.

ಒಡ್ಡೋಲಗದಲ್ಲಿ ರಾಜಪರಿವಾರವೆಲ್ಲ ಕಲೆತಿರುತ್ತಾರೆ. ರಾಜನ ಸಾಮಂತರು, ದಂಡನಾಯಕರು, ಮಂತ್ರಿಗಳು, ಆಶ್ರಿತರು, ಬಂಧುಗಳು, ಆಹ್ವಾನಿತರು ಎಲ್ಲರೂ ಅವರವರ ಅಂತಸ್ತಿಗೆ ಅನುಗುಣವಾದ ಸ್ಥಾನಗಳಲ್ಲಿ ಮಂಡಿಸಿರುತ್ತಾರೆ. ದೇಶ ವಿದೇಶಗಳಿಂದ ಬಂದಿರಬಹುದಾದ ರಾಯಭಾರಿಗಳು, ನಿಯೋಗಿಗಳು ಮೊದಲಾದವರು ಅರಸನ ಸಂದರ್ಶನ ಪಡೆಯಲು ಒಡ್ಡೋಲಗದಲ್ಲಿ ಅವಕಾಶವುಂಟು. ಕೌರವನ ಮಹಾಸಭೆಯನ್ನು ವರ್ಣಿಸಲು ಹೊರಟ ಕುಮಾರವ್ಯಾಸ ನಾನಾ ದಿಗಂತದ ಧರಣಿಪರು ಸಚಿವರು ಪಸಾಯ್ತರು ನೆರೆದುದನ್ನು ವರ್ಣಿಸಿದ್ದಾನೆ. ರಾಜದರ್ಶನಾಕಾಂಕ್ಷಿಗಳಾದ ಜನರೆಲ್ಲ ಬಂದು ಆಸ್ಥಾನಮಂಟಪದಲ್ಲಿ ಸಮುಚಿತಾಸನಗಳಲ್ಲಿ ಕುಳಿತ ಮೇಲೆ ಅರಸ ಪರಮಾಪ್ತರಾದವರ ಜೊತೆಯಲ್ಲಿ ಒಡ್ಡೋಲಗಕ್ಕೆ ಬಿಜಯ ಮಾಡಿಸುತ್ತಾನೆ. ಆ ಸಮಯಕ್ಕೆ ಸರಿಯಾಗಿ ನಾನಾ ಮಂಗಳ ವಾದ್ಯಗಳ ಧ್ವನಿ ಹೊಮ್ಮುತ್ತದೆ. ಅದು ಅರಸನ ಬರವಿನ ಸೂಚನೆ. ಆ ಶಬ್ದ ಕೇಳುತ್ತಲೆ ಓಲಗಾರ್ತರೆಲ್ಲ ಎದ್ದು ನಿಂತು ಜಯ ಘೋಷಮಾಡುತ್ತಾರೆ. ಹೊಗಳುಭಟ್ಟರು ಅರಸನ ಬಿರುದಾವಳಿಯನ್ನು ಉದ್ಘೋಷಿಸುತ್ತಾರೆ. ‘ಅರಿರಾಜಗಿರಿವಜ್ರದಂಡ! ಸ್ನೇಹಿತನೃಪಸರಸಿಜವನಮಾರ್ತಾಂಡ! ಕನ್ನಡ ರಾಜ್ಯರಮಾರಮಣ! ಜಯ ಜಯ ಜಯತು!’ ಈ ಬಗೆಯ ಹೆಗ್ಗಳಿಕೆಯ ಹೆಸರುಗಳನ್ನು ವಂದಿಮಾಗಧರು ಗಟ್ಟಿಯಾಗಿ ಹೇಳುತ್ತಿರುವಾಗಲೆ ಪ್ರಭು ಮೆಲ್ಲನೆ ನಡೆದು ಬಂದು ಸಿಂಹಾಸನಕ್ಕೆ ಪ್ರದಕ್ಷಿಣೆಮಾಡಿ ಆಪ್ತರ ಹಸ್ತಲಾಘವವನ್ನು ಸ್ವೀಕರಿಸಿ ಸಿಂಹಾಸನವನ್ನು ಏರುತ್ತಾನೆ. ಒಡನೆಯೇ ಮಂಗಳಾಷ್ಟಕವನ್ನು ಹೇಳುವ ವಿಪ್ರರ ಧ್ವನಿ ಕೇಳಿಸುತ್ತದೆ. ಸಿಂಹಾಸನದ ಇಕ್ಕೆಲಗಳಲ್ಲಿ ನಿಂತ ಸೇವಕರು ಚಾಮರಗಳನ್ನು ಡಾಳಿಸುತ್ತಿರುತ್ತಾರೆ. ಆಮೇಲೆ ಗಾಯಕರು ತಕ್ಕ ಸಿದ್ಧತೆಯೊಡನೆ ಹಾಡತೊಡಗುತ್ತಾರೆ. ಅರಸನ ಸಮ್ಮುಖದಲ್ಲಿ ವೇದಜ್ಞರಾದ ಬ್ರಾಹ್ಮಣರು, ಶಾಸ್ತ್ರಜ್ಞರು ಮಂತ್ರೋದಯಾಢ್ಯರು ನಿಂತು ಆಶೀರ್ವಾದ ಮಾಡುತ್ತಾರೆ. ತಾರ್ಕಿಕರು, ವಾಚಕರು, ಭಾರತಿಗಳು (ಗಮಕಿಗಳು)-ಮೊದಲಾದ ವಿದ್ಯಾವಂತರು ಸಭೆಯಲ್ಲಿ ಮಂಡಿಸಿರುತ್ತಾರೆ. ಆಗ ದಳಪತಿ, ಮನ್ನೆಯರು, ಮಾಂಡಳಿಕರು, ರಾಯರಾವುತರು-ಮೊದಲಾದವರು ಅರಸನಿಗೆ ಇದಿರಾಗಿ ಬಂದು ಬಾಗಿ ಕೈಮುಗಿದು ತಮ್ಮ ಗೌರವ ಸಲ್ಲಿಸುತ್ತಾರೆ. ಒಡ್ಡೋಲಗದ ಒಂದೆಡೆಯಲ್ಲಿ ಗಾಯಕರು ತಂಬೂರಿ ಹಿಡಿದು ಗಾನಾಮೃತವನ್ನು ಸೂಚಿಸುತ್ತಿದ್ದರೆ ಇನ್ನೊಂದು ಕಡೆ ವೈಣಿಕರು ತಮ್ಮ ಕಲೆಯ ವೈಭವವನ್ನು ಮೆರೆಯಿಸುತ್ತಾರೆ. ಭಾರತ ರಾಮಾಯಣಾದಿ ಪುಣ್ಯ ಕಥೆಗಳನ್ನು ಭಾರತಿಗಳು ರಾಗವಾಗಿ ಹಿತವಾಗಿ ವಾಚನ ಮಾಡುತ್ತಾರೆ. ಇನ್ನೊಂದು ಕಡೆ ಭರತನಾಟ್ಯ ಬೆಳೆಯುತ್ತದೆ.

ಅರಸನ ಎಡಬಲಗಳಲ್ಲಿ ಸಾಲುಗಟ್ಟಿ ಕುಳಿತಿರುವ ಮಂತ್ರಿಗಳು ದಳಪತಿಗಳು ಪ್ರಭುವಿಗೆ ತಮ್ಮ ರಾಜಭಕ್ತಿ ಗೌರವಗಳನ್ನು ನಿವೇದಿಸಿ ವಂದನೆ ಸಮರ್ಪಿಸಿದ ಮೇಲೆ ರಾಜನ ಸಂದರ್ಶನಾಕಾಂಕ್ಷಿಗಳಾಗಿ ಬಂದ ಅನ್ಯರಾಜ್ಯಗಳ ನಿಯೋಗಿಗಳು ಎದ್ದು ವಂದಿಸಿ ಕಾಣಿಕೆಗಳನ್ನು ಒಪ್ಪಿಸಿ ತಮ್ಮ ಪ್ರಭುಗಳ ಸಂದೇಶಗಳನ್ನು ವರದಿಮಾಡಿ ಉಚಿತಾಸನಗಳಲ್ಲಿ ಕೂಡುತ್ತಾರೆ. ಎರಡನೆಯ ಪುಲಿಕೇಶಿಯ ಆಸ್ಥಾನದಲ್ಲಿ ಪರ್ಷಿಯದ ರಾಜ ನಿಯೋಗಿಗಳು ನಜರು ಒಪ್ಪಿಸುತ್ತಿರುವ ಶಿಲ್ಪವೊಂದು ದೊರೆತಿದೆ.

ಇದೇ ಸಮಯದಲ್ಲಿ ಸಭಾಮಂಟಪದ ಮುಂದೆ ಬಯಲಿನಲ್ಲಿ ತುರಗಾರೋಹಕರು ಗಜಾರೋಹಕರು ತಮ್ಮ ನಿಪುಣತೆಯ ಪ್ರದರ್ಶನ ನೀಡುತ್ತಿರುವರು. ಮಲ್ಲಯುದ್ಧಗಳು ನಡೆದು ವಿಜಯಿಗಳಿಗೆ ಪಾರಿತೋಷಕಗಳನ್ನು ಹಂಚುವ ಸಮಾರಂಭ ನಡೆಯುವುದು. ಓಲಗದ ಕಾರ್ಯಕ್ರಮ ಮುಗಿಯುವ ಮುನ್ನ ಸಮಸ್ತ ಓಲಗಕಾರರಿಗೂ ವೀಳೆಯ, ಉಡುಗೊರೆಗಳನ್ನು ಪ್ರಭುವಿನ ಅಪ್ಪಣೆಯಂತೆ ಅಧಿಕಾರಿಗಳು ಸಲ್ಲಿಸುವರು. ಅನಂತರ ಪ್ರಭುಗಳು ಎದ್ದು ನಿಂತು ಎಲ್ಲರ ಜಯಘೋಷಣೆ ಕೇಳುತ್ತ ಸಿಂಹಾಸನದಿಂದ ಇಳಿದು ಆಪ್ತಪರಿವಾರದೊಡನೆ ಅಂತಃಪುರಕ್ಕೆ ದಯಮಾಡಿಸುವರು. ಆಮೇಲೆ ಓಲಗಕಾರರು ಚದರುವರು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದರ್ಬಾರು&oldid=1231398" ಇಂದ ಪಡೆಯಲ್ಪಟ್ಟಿದೆ








ApplySandwichStrip

pFad - (p)hone/(F)rame/(a)nonymizer/(d)eclutterfier!      Saves Data!


--- a PPN by Garber Painting Akron. With Image Size Reduction included!

Fetched URL: https://kn.wikipedia.org/wiki/%E0%B2%A6%E0%B2%B0%E0%B3%8D%E0%B2%AC%E0%B2%BE%E0%B2%B0%E0%B3%81

Alternative Proxies:

Alternative Proxy

pFad Proxy

pFad v3 Proxy

pFad v4 Proxy