ನಿರಂಜನ
ನಿರಂಜನ :- | |
---|---|
ಕುಳಕುಂದ ಶಿವರಾಯ | |
Born | ಕುಳಕುಂದ ಶಿವರಾಯ 15ನೇ ಜೂನ್ 1926 ಕುಳಕುಂದ, ದಕ್ಷಿಣ ಕನ್ನಡ ಜಿಲ್ಲೆ |
Died | ಬೆಂಗಳೂರು |
Nationality | ಭಾರತೀಯ |
Citizenship | ಭಾರತೀಯ |
Education | ಮೆಟ್ರಿಕ್ಯುಲೇಶನ್ |
Occupation | ಬರಹಗಾರ |
Known for | ಕಥೆ, ಕಾದಂಬರಿ ಮತ್ತು ಅಂಕಣ ಬರಹ |
Movement | ಪ್ರಗತಿಶೀಲ ಸಾಹಿತ್ಯ |
Spouse | ಅನುಪಮಾ ನಿರಂಜನ |
Children | ಸೀಮಂತಿನಿ ಮತ್ತು ತೇಜಸ್ವಿನಿ |
Parent | ತಾಯಿ ಚೆನ್ನಮ್ಮ |
Awards | ಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಮೃತ್ಯುಂಜಯ | |
ಚಿರಸ್ಮರಣೆ | |
ವಿಮೋಚನೆ | |
ರಂಗಮ್ಮನ ವಠಾರ | |
ಸಮಗ್ರ ಕಥೆಗಳು | |
ಅಂಕಣ ಬರಹ |
ನಿರಂಜನ (೧೯೨೪-೧೯೯೫) ಒಬ್ಬ ಖ್ಯಾತ ಬರಹಗಾರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ನಿಜ ನಾಮಧೇಯ ಕುಳಕುಂದ ಶಿವರಾಯ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ ಮಾರ್ಕ್ಸ ,ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ.ಕನ್ನಡದ ಮೊದಲ ಅಂಕಣ ಬರಹಗಾರರು. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ಏಳು ಸಂಪುಟಗಳ ಜ್ಞಾನ ಗಂಗೋತ್ರಿ ಅಂದರೆ ಮಕ್ಕಳ ವಿಶ್ವಕೋಶ ಹಾಗೂ ಪ್ರಪಂಚದ ಮಹತ್ತರವಾದ ವಿಶ್ವಕಥಾಕೋಶದ ೨೫ ಸಂಪುಟಗಳು ಸೇರಿವೆ.[೧]
ಜೀವನ
[ಬದಲಾಯಿಸಿ]ಹುಟ್ಟಿದ ಸ್ಥಳ ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಹತ್ತಿರ ಕುಳಕುಂದದಲ್ಲಿ ಕುಳಕುಂದ (೧೫ನೇ ಜೂನ್ ೧೯೨೪). ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ದಿನಾಂಕ ೦೫-೦೨-೧೯೫೬ ರಂದು ಸಜ್ಜನರಾವ್ ಕಲ್ಯಾಣ ಮಂಟಪ, ವಿಶ್ವೇಶ್ವರಪುರ, ಬೆಂಗಳೂರು ಇಲ್ಲಿ ಮದುವೆ - (ಮಿತ್ರ ಹೆಚ್.ಆರ್.ನಾಗೇಶರಾವ್ ಡೈರಿ ಉಲ್ಲೇಖ). ನಾಗೇಶರಾವ್ ಅವರಿಗೆ ನಿರಂಜನ ಸೇರಿದಂತೆ ಎಸ್.ಕೆ.ನಾಡಿಗ್, ಶೇಷನಾರಾಯಣ, ವೆಂಕಟರಾಜ ಪಾನಸೆ, ಸೇವ ನಮಿರಾಜ ಮಲ್ಲ, ಕೋ.ಚೆನ್ನಬಸಪ್ಪ, ಸಿ.ಎಚ್. ಪ್ರಹ್ಲಾದರಾವ್ ಮತ್ತಿತರರನ್ನು ಪರಿಚಯಿಸಿದವರು ಚಿತ್ರಗುಪ್ತ ವಾರಪತ್ರಿಕೆಯ ಸಂಪಾದಕರಾಗಿದ್ದ ಎಂ.ಎಸ್.ಭಾರದ್ವಾಜ್. ಅನುಪಮಾ ನಿರಂಜನರಿಗೆ ಮಕ್ಕಳು ಸೀಮಂತಿನಿ ಮತ್ತು ತೇಜಸ್ವಿನಿ - ಇಬ್ಬರೂ ಲೇಖಕರು. ನಿರಂಜನ ಹತ್ತು ವರ್ಷದವನಾಗಿದ್ದಾಗ ಸುಳ್ಯದಲ್ಲಿ ಗಾಂಧೀಜಿಯವರ ದರ್ಶನದಿಂದ ಅವರ ಬದುಕಿನ ಪರಿವರ್ತನೆಗೆ ಕಾರಣವಾಯಿತು. ಮುಂದೆ ಪುತ್ತೂರಿನಲ್ಲಿ ನೆಹರು ಅವರ ಭಾಷಣದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯದ ಹೋರಾಟಕ್ಕೆ ನಾಂದಿಯಾಯಿತು.
ಪತ್ರಿಕೆಗಳ ಜೊತೆ ನಂಟು
[ಬದಲಾಯಿಸಿ]- ೧೯೪೨ ರಿಂದ ಮೂರು ವರ್ಷ ರಾಷ್ಟ್ರಬಂಧು ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.
- ಬಸವರಾಜ ಕಟ್ಟೀಮನಿ ಯವರು ಉಷಾ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಅದಕ್ಕೂ ನಿರಂಜನ ಅವರ ಲೇಖನಗಳ ಸುರಿಮಳೆಯಾಯ್ತು.
- ಚಿತ್ರಗುಪ್ತ, ತಾಯಿನಾಡುವಿನ ಸಹೋದರ ಪತ್ರಿಕೆಗೆ ನಿಯಮಿತವಾಗಿ ಕತೆ ಮತ್ತು ಲೇಖನಗಳನ್ನು ಬರೆಯುತ್ತಿದ್ದರು.
- ಜನಪ್ರಗತಿ ಪತ್ರಿಕೆಗೆ ಅವರು ತಮ್ಮ `ಕಾಲ್ಪನಿಕ' ಗೆಳತಿ `ಸಾಧನಾ'ಗೆ ಬರೆಯುತ್ತಿದ್ದ ಸಾಹಿತ್ಯಿಕ ಪತ್ರಗಳು ಸಾಧನ ಸಂಚಯ ಅಂಕಣವಾಗಿತ್ತು. ಮುಂದೆ ಪುಷ್ಪಹಾರ, ಸಾಧನಾ ಪುಸ್ತಕಗಳಾದವು.
- ಕರ್ಮವೀರ ವಾರಪತ್ರಿಕೆಗೆ ರಾಜಧಾನಿಯಿಂದ ಅಂಕಣ ಬರೆಯುತ್ತಿದ್ದರು.
- ಪ್ರಜಾಮತ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು ಕೆಲವುಕಾಲ.
- ಕಮ್ಯೂನಿಸ್ಟ್ ಪಕ್ಷದ ಜನಶಕ್ತಿ ಯ ಸಂಪಾದಕರಾಗಿ ದುಡಿದರು.
ಕೃತಿ ವಿಮರ್ಶೆ
[ಬದಲಾಯಿಸಿ]‘ತಾಯಿನಾಡು’ ಮತ್ತು ‘ಚಿತ್ರಗುಪ್ತ’ ಪತ್ರಿಕೆಗಳಿಗೆ ೫೦-೬೦ರ ದಶಕದಲ್ಲಿ ಪುಸ್ತಕ ವಿಮರ್ಶೆಗಳನ್ನು ಮಾಡುತ್ತಿದ್ದವರು - ‘ಪುಸ್ತಕಪ್ರಿಯ’ ಹೆಸರಿನ ಹೆಚ್.ಆರ್.ನಾಗೇಶರಾವ್. ಐದು ದಶಕಗಳ ಹಿಂದಿನ ವಿಮರ್ಶೆಯ ಸ್ವರೂಪದ ಸ್ಯಾಂಪಲ್‍ಗಳು ಇಲ್ಲಿದೆ. ರಂಗಮ್ಮನ ವಠಾರ (ಕಾದಂಬರಿ. ಲೇಖಕರು: ಶ್ರೀ ‘ನಿರಂಜನ’, ಪ್ರಕಾಶಕರು: ವಾಹಿನಿ ಪ್ರಕಾಶನ, ಜಯಚಾಮರಾಜ ರಸ್ತೆ, ಬೆಂಗಳೂರು-2, ಬೆಲೆ: ಒಂದೂವರೆ ರೂಪಾಯಿ)
- "ವಠಾರ ಜೀವನವೆಂದರೆ ‘ಗಟಾರ’ ಜೀವನವಲ್ಲ" ಎಂಬುದನ್ನು ಬಿತ್ತರಿಸುವ ಶ್ರೇಷ್ಠ ಕೃತಿ, ಈ ೨೭೪ ಪುಟಗಳ ಕೈ ಹೊತ್ತಿಗೆ. ಬೆಂಗಳೂರಿನಂತಹ ನಗರದಲ್ಲಿ, ಮಧ್ಯಮ ವರ್ಗದ ಜನರು ವಸತಿಗಾಗಿ ‘ಕಡಿಮೆ’ ಬಾಡಿಗೆಯ ವಠಾರಗಳನ್ನು ಅವಲಂಬಿಸಿ, ಎಂತಹ ಕಷ್ಟಗಳನ್ನೂ ನುಂಗಿಕೊಂಡು ಜೀವನ ನಡೆಸುತ್ತಿರುವುದನ್ನು ನಿರಂಜನರು ಹೃದಯಂಗಮವಾಗಿ ವಿವರಿಸಿದ್ದಾರೆ. ಇಂತಹ ದುರ್ಭರ ಸ್ಥಿತಿಯಲ್ಲೂ ಜೀವನದ ಕಹಿಯನ್ನು ಮರೆತು ತಮ್ಮ ಪ್ರೇಮದ ಬಾಳ್ವೆಯಿಂದ, ವಿನೋದ ರಸಿಕತೆಯಿಂದ ವಾತಾವರಣವನ್ನೇ ಆಹ್ಲಾದಗೊಳಿಸಬಹುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ಬರುತ್ತಾರೆ, ಚಂಪಾವತಿ ಮತ್ತು ಶಂಕರನಾರಾಯಣರಾಯರು. ವಠಾರ ಜೀವನವನ್ನು ವಿಷಮಯವಾಗಿ ಮಾಡಲು ಪ್ರಯತ್ನಿಸುವ ಪಾತ್ರಗಳೂ ಇಲ್ಲದೇ ಇಲ್ಲ.
- ಎಂತಹ ದ್ವೇಷವಿದ್ದರೂ ಸಾವಿನ ಮುಂದೆ ಮತ್ತು ಸಾರ್ವತ್ರಿಕ ಗಂಡಾಂತರದ ಮುಂದೆ ಮರೆತು ವಿಶಾಲ ಹೃದಯವನ್ನು ತೋರುವ ವ್ಯಕ್ತಿಗಳೂ ಇಲ್ಲಿ ಚಿತ್ರಿತವಾಗಿದ್ದಾರೆ; ಕೊಡ ನೀರಿಗಾಗಿ ಮತ್ತು ಒಂದು ನಿಮಿಷ ಮುಂಚಿತವಾಗಿ ನೀರು ಹಿಡಿಯುವುದಕ್ಕಾಗಿ ಕಚ್ಚಾಡುವ ‘ಮಹಾರಾಯಿತಿ’ ಯರೂ ಇದ್ದಾರೆ. ವಠಾರ ಜೀವನದಲ್ಲಿ ನಿಜ ಪ್ರೇಮ ಹುಟ್ಟುತ್ತದೆ; ಕಾಮ ತಲೆದೋರುತ್ತದೆ. ದ್ವೇಷ ಅಸೂಯೆಗಳು ಕೆರಳುತ್ತವೆ; ಸರಸ ವಿರಸವಾಗುತ್ತದೆ; ಸುಸಂಸ್ಕೃತರೂ ಅನಾಗರಿಕರೂ ಒಟ್ಟಿಗೆ ಬಾಳ ಬೇಕಾಗುತ್ತದೆ. ಮಾನವತೆಯ ಭಿನ್ನ ಭಿನ್ನ ವಿಭಾಗಗಳನ್ನು ಮತ್ತು ಪ್ರಕೃತಿ ವಿಶೇಷಗಳನ್ನಿಲ್ಲಿ ಕಾಣಬಹುದಾಗಿದೆ. ಚಿಕ್ಕ ಜಗತ್ತನ್ನೇ ನೋಡಬಹುದಾಗಿದೆ.
- ಕೇವಲ ಬಾಡಿಗೆ ಆಸೆಯ ಮನೆಯೊಡತಿ ರಂಗಮ್ಮನಲ್ಲೂ ಮಾನವೀಯ ಅನುಕಂಪ, ಸಹಾನುಭೂತಿ, ಸುಖದ ಹಾರೈಕೆ ಮತ್ತು ಕಷ್ಟ ಕಾಲದಲ್ಲಿ ನೆರವಾಗುವ ಬುದ್ಧಿ ಇರುವುದೆಂಬುದನ್ನೂ ಲೇಖಕರು ತೋರಿಸಿದ್ದಾರೆ. ವಠಾರ ಜೀವನದಲ್ಲಿ ಎಲ್ಲ ಬಗೆಯ ಜನರ ಪ್ರತಿಬಿಂಬವನ್ನೂ ಕಾಣ ಬಹುದಾಗಿದೆ. ಈ ಸಂಗ್ರಹಾರ್ಹ ಕಾದಂಬರಿ ಕೆಲವೆಡೆ ಬರುವ ಕೋಮುವಾರು ಪ್ರಸ್ತಾಪಗಳಿಲ್ಲದೆಯೇ ಸಾಗಬಹುದಾಗಿತ್ತು; ದಿನಕ್ಕೆ ಮೂರೇ ಕೊಡ ನೀರಿನಲ್ಲಿ ಒಂದೊಂದು ಕುಟುಂಬವೂ ಕಾಲ ಹಾಕುತ್ತಿತ್ತೆಂದು (ಬಾವಿಯ ಸೌಕಯದ ವ್ಯವಸ್ಥೆಯೇನನ್ನೂ ಕಲ್ಪಿಸದೆ!) ಹೇಳುವುದು ವಿಪರೀತ ಉತ್ಪ್ರೇಕ್ಷೆಯೆನ್ನಬೇಕು. ಪುಸ್ತಕದಲ್ಲಿ ಬರುವ ಸಂವಾದಾತ್ಮಕ ಹಿನ್ನುಡಿ ಬಹಳ ಉದ್ದವಾಯಿತೆಂದೇ ಹೇಳಬೇಕಾಗಿದೆ; ಪ್ರತಿಯೊಂದು ಪುಸ್ತಕದಲ್ಲೂ ಇದೇ ಬಗೆಯ ಪೀಠಿಕಾ ತಂತ್ರವನ್ನು ಉಪಯೋಗಿಸತೊಡಗಿದರೆ, ಇದು ಅಪ್ರತ್ಯಕ್ಷ ಆತ್ಮ ಪ್ರಶಂಸೆಯ ವಿನೂತನ ವಿಧಾನವೋ ಎಂಬ ಅನುಮಾನವನ್ನು ಓದುಗರಲ್ಲಿ ಮೂಡಿಸಿದರೂ ಅಚ್ಚರಿಯಿಲ್ಲ.
- ಪುಸ್ತಕಪ್ರಿಯ ತಾಯಿನಾಡು, ‘ಪ್ರಕಟಣ ಪ್ರಪಂಚ’ ಅಂಕಣ; ೨೫-೯-೧೯೫೪
ವಾಸ್ತವಿಕ ಪ್ರಪಂಚದ ಬಗ್ಗೆ ಕಲ್ಪನೆಯ ಪ್ರೇಯಸಿಗೆ ಕಾಗದಗಳು!
ಸಾಧನಾ ಲೇಖಕರು - ನಿರಂಜನ; ಪ್ರಕಾಶಕರು - ಪುರೋಗಾಮಿ ಪ್ರಕಾಶನ, ಬಸವನಗುಡಿ,ಬೆಂಗಳೂರು-೪; ಬೆಲೆ-ರೂ.೧-೮-೦
- ಪ್ರಚಲಿತ ಜಗತ್ತಿನಲ್ಲಿ - ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ, ಪುಸ್ತಕ-ಪತ್ರಿಕಾ ಪ್ರಪಂಚಗಳಲ್ಲಿ, ಸುದ್ದಿಯ ವಿಶ್ವದಲ್ಲಿ ನಡೆದ ವಿವಿಧ ಘಟನೆಗಳನ್ನು, ವರದಿಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ವಿಮರ್ಶಿಸುವುದರಲ್ಲಿ, ವಿವೇಚಿಸುವುದರಲ್ಲಿ ಹೆಸರಾದ ಶ್ರೀ `ನಿರಂಜನ'ರು ತಮ್ಮ ಕಲ್ಪನೆಯ (?) ಪ್ರೇಯಸಿ `ಸಾಧನಾ'ಳಿಗೆ `ಜನಪ್ರಗತಿ'ಯ ಮೂಲಕ ಕಳಿಸಿ ಕೊಟ್ಟ `ಮೇಘ ಸಂದೇಶ'ದ ಆರಿಸಿದ ಸಂಗ್ರಹ ಈ ಪುಸ್ತಕ. ಶ್ರೀ `ನಿರಂಜನ'ರ ಮೇಘ ಸಂದೇಶದಲ್ಲಿ ಪ್ರಣಯವು ವಿಚಾರ ವಿಮರ್ಶೆಯ ಎಳೆಗಳ ನಡುವೆ ಜರತಾರಿ ಅಂಚು-ಚಿತ್ರಗಳಂತೆ ಅಲ್ಲಲ್ಲಿ ಮಿ೦ಚುವುದೇ ಹೊರತು ಕೇವಲ ಪ್ರಣಯವನ್ನು ತೋಡಿಕೊಳ್ಳುವುದೇ ಅದರ ಉದ್ದೇಶವಲ್ಲ.
- ಯಾವುದೇ ಪ್ರಮುಖ ವಿಷಯದ ಬಗ್ಗೆ ಎಷ್ಟೇ ವಿಚಾರಪೂರಿತವೂ ಗ೦ಭೀರವೂ ಆದ ಪ್ರಬ೦ಧವನ್ನು ಬರೆದರೂ ಅದು ಎಲ್ಲಾ ಓದುಗರಿಗೂ ಹಿಡಿಸದು; ಆದರೆ ಅದಕ್ಕೆ ಪ್ರಣಯ ಪತ್ರದ ಚೌಕಟ್ಟು ಹಾಕಿದರೆ ಎ೦ತಹ ತೀವ್ರ ವಿಷಯವನ್ನಾಗಲೀ ಓದುಗರು ಆಸಕ್ತಿಯಿ೦ದ ಓದುತ್ತಾರೆ. `ಜನಪ್ರಗತಿ'ಯಲ್ಲಿ ಅವ್ಯಾಹತವಾಗಿ ಬರುತ್ತಿರುವ ಈ ಪತ್ರಮಾಲೆಯೇ ಕನ್ನಡ ಓದುಗರ ಮೇಲಿನ ಈ ಸತ್ವ ಪರೀಕ್ಷೆಗೆ ಸಾಕ್ಷಿ. ಪ್ರತಿ ಯುವಕ ಯುವತಿಯೂ ಈ ಸ೦ಕಲನವನ್ನು ಆಸಕ್ತಿಯಿಟ್ಟು ಓದುವುದರಲ್ಲಿ ಸ೦ಶಯವಿಲ್ಲ. ಶ್ರೀ `ನಿರಂಜನ'ರು ಈ ಬಗೆಯ ರಚನಾ ಕೌಶಲ್ಯದಲ್ಲಿ ಸಿದ್ಧ ಹಸ್ತರಾಗಿದ್ದಾರೆ; ಪತ್ರಿಕೆಗಳ ಯಾವ ಮೂಲೆಯಲ್ಲೋ ಸರಿಯಾಗಿ ಗಮನಕ್ಕೆ ಬಾರದೆ ಹೋದ ಎರಡು ಮೂರು ಸಾಲಿನ ಸುದ್ದಿಗಳನ್ನವರು ಎತ್ತಿ, ಅದನ್ನು ವಿಸ್ತರಿಸಿ ಅದಕ್ಕೆ ನ್ಯಾಯವಾಗಿ ಸಲ್ಲಬೇಕಾದ ಮನ್ನಣೆಯನ್ನು ತೋರಿಸಿದ್ದಾರೆ.
- ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾಗಿರುವ ವರದಿಗಳು ಕಂಡು ಬ೦ದರೂ, ಅದರ ಬೆನ್ನು ಹತ್ತಿ ಮೂಲವನ್ನು ಶೋಧಿಸಿ, ನೋವಿನ ಆಳವನ್ನು ಚಿತ್ರಿಸಿದ್ದಾರೆ. ಕುತೂಹಲಕರ, ಕೋಲಾಹಲಕರ ಪ್ರಸ೦ಗ-ವಿಷಯಗಳನ್ನ೦ತೂ ಅವರು ಸು೦ದರವಾಗಿ, ಸ್ವಾರಸ್ಯವಾಗಿ `ಸಾಧನಾ'ಗೆ ವರ್ಣಿಸುವುದನ್ನು ಓದಿದಾಗ ವಾಚಕರನ್ನು ಮಾ೦ತ್ರಿಕನ ಮಾತಿಗೆ ಮುಗ್ಧರಾಗುವ ರೀತಿ ಮಾಡುವುದು. ಇ೦ತಹ ಸಿದ್ಧ ಹಸ್ತವನ್ನುಳ್ಳ ಶ್ರೀ `ನಿರ೦ಜನ'ರು ಇತ್ತೀಚಿಗೆ ಅಪಘಾತ ಒ೦ದಕ್ಕೀಡಾಗಿ ಮೂಳೆ ಮುರಿದುಕೊ೦ಡು ಮೂಕವ್ಯಥೆ ಪಟ್ಟುದನ್ನು ಈ ಸ೦ಕಲನದ ಕೊನೆಯ ಪತ್ರದಲ್ಲಿ ಓದಿದಾಗ ಕಣ್ಣಲ್ಲಿ ನೀರು ಬರುವುದು. ಆ ಹಸ್ತವನ್ನು ಕನ್ನಡಿಗರಿಗಾಗಿ ಉಳಿಸಿಕೊಟ್ಟ ಸರ್ಜನ್ ಶ್ರೀ ಕೆ. ಕೃಷ್ಣಮೂರ್ತಿಯವರಿಗೆ ಈ ಸ೦ಗ್ರಹವನ್ನು ಅರ್ಪಿಸಿರುವುದು ನ್ಯಾಯವಾಗಿಯೇ ಇದೆ.
- "ಪುಸ್ತಕಪ್ರಿಯ" ತಾಯಿನಾಡು, ೨೮-೧೧-೧೯೫೩
ಕೃತಿಗಳು
[ಬದಲಾಯಿಸಿ]ಕಾದಂಬರಿಗಳು
[ಬದಲಾಯಿಸಿ]- ವಿಮೋಚನೆ (1953)
- ಬನಶಂಕರಿ (1954)
- ಅಭಯ (1954)
- ದೂರದ ನಕ್ಷತ್ರ (1954)
- ರಂಗಮ್ಮನ ವಠಾರ (1954)
- ಜಸ್ಟಿನ ರೊಮಿತ್ (1954)
- ಪಾಲಿಗೆ ಬಂದ ಪಂಚಾಮೃತ (1955)
- ಚಿರಸ್ಮರಣೆ (1955)
- ಏಕಾಂಗಿನಿ (1955)
- ಕೊನೇ ನಮಸ್ಕಾರ (1955)
- ಮಿಣುಕುಹುಳ (1956)
- ವಿಲಾಸಿನಿ (1956)
- ಕಲ್ಯಾಣಸ್ವಾಮಿ (1956)
- ದೀಕ್ಷೆ (1956)
- ನವೋದಯ (1956)
- ಅಂಜನ (1957)
- ಟೀಪೂ (ಐದು ಭಾಗಗಳಲ್ಲಿ)
- ತೊಟ್ಟಿಲು ತೂಗದ ಕೈ
- ಹೆಣ್ಣಾಗಿ ಕಾಡಿತ್ತು ಮಾಯೆ (1962)
- ಸ್ಮರಣೆಯೊಂದೇ ಸಾಲದೇ (1971)
- ಬಂಗಾರದ ಜಿಂಕೆ (1963)
- ಸ್ವಾಮಿ ಅಪರಾಂಬರ (1967)
- ಮೃತ್ಯುಂಜಯ (1976)
ಕಥಾ ಸಂಕಲನಗಳು
[ಬದಲಾಯಿಸಿ]- ಸಂಧಿಕಾಲ (1947)
- ರಕ್ತ ಸರೋವರ (1947)
- ಅನ್ನಪೂರ್ಣಾ (1952)
- ಕೊನೆಯ ಗಿರಾಕಿ (1953)
- ಕಾತ್ಯಾಯಿನಿ (1957)
- ನಾಸ್ತಿಕ ಕೊಟ್ಟ ದೇವರು (1965)
ಪತ್ರ ಸಂಕಲನ
[ಬದಲಾಯಿಸಿ]- ಸಾಧನಾ (1953)
- ಪುಷ್ಪಹಾರ (1957)
‘ನಿರಂಜನ’ ಅವರು ಬರೆಯುತ್ತಿದ್ದ ‘ಸಾಧನ ಸಂಚಯ’ ಎಂಬ ವಿಶಿಷ್ಟ ಅಂಕಣದ ಎರಡನೆಯ ಸಂಕಲನವಾದ ‘ಪುಷ್ಪಹಾರ’ದಿಂದ ಆಯ್ದ ಲೇಖನವಿದು. ಅದು ‘ಜನಪ್ರಗತಿ’ಯ ೧೯೫೪ರ ಅಕ್ಟೋಬರ್-ನವೆಂಬರ್ ನಡುವಣ ಒಂದು ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಹಿರಿಯ ವ್ಯಕ್ತಿಯ ವಿನಯಶೀಲತೆ
- ಒಡತಿ- ಬಿಡುವು ಮಾಡಿಕೊಂಡು ನೀನು ಬರೆದ ನಾಲ್ಕು ಸಾಲುಗಳ ಕಾಗದ ಬಂತು. ‘ಮರೆತು ಬಿಡಬೇಡ’ ಎಂದಿದೀಯಾ. ಅದೊಳ್ಳೇ ಎಚ್ಚರಿಕೆ! ಇಲ್ಲಿ ನಿತ್ಯ ಸ್ಮರಣೆ ನಡೆದಿರುವಾಗಲೂ ಎಂತಹ ಮಾತು!
- ಆದರೂ, ಮರೆತು ಹೋಗದ ವಿಷಯಗಳೇ ಇಲ್ಲ ಎನ್ನಲಾರೆ. ಉದಾಹರಣೆಗೆ ಎಂದೋ ಏನೋ ಎಲ್ಲಿಯೋ ಓದಿದ್ದು. ಅಷ್ಟೇ ಅಲ್ಲ, ಒಮ್ಮೊಮ್ಮೆ ಬಲು ಚೆನ್ನಾಗಿ ನಮಗೆ ತಿಳಿದಿದೆ ಎನ್ನುವಂತಹ ವಿಷಯವನ್ನೂ ನಾವೂ ಮರೆತಿರುವುದುಂಟು.
- ಹಿಂದೆಯೊಮ್ಮೆ ನಾನು ನಿನಗೆ ಬರೆದಾಗ ಮಾಡಿದ ಸಣ್ಣ ತಪ್ಪು, ಸೀತಾದೇವಿಯ ಅಗ್ನಿ ಪರೀಕ್ಷೆಯ ಸ್ಥಳ-ಕಾಲಗಳನ್ನೇ ಬದಲಿಸಿಬಿಟ್ಟಿದ್ದೆ! ನನ್ನ ಬರವಣಿಗೆಯಲ್ಲಿ ಯಾರಿಗೂ ಕಾಣದುದನ್ನು ಯಾವಾಗಲೂ ಕಂಡು ಹಿಡಿಯುವ ಸೂಕ್ಷ್ಮದರ್ಶಿ ನೀನು. ಆ ಸಾರೆ ಮಾತ್ರ ಮೋಸ ಹೋದೆ. ಆದರೆ ನನಗೇ ನೆನಪಾಗಿ ತಪ್ಪು ತಿಳಿದಾಗ ಎಷ್ಟೋ ಕೆಡುಕೆನಿಸಿತು. ನಮ್ಮ ಪ್ರಾಚೀನ ಸಾಹಿತ್ಯ ಕೃತಿರತ್ನಗಳನ್ನೇ ನಾವು ತಿಳಿದಿರುವ ಬಗೆ ಎಷ್ಟೊಂದು ಬಡವಾದದ್ದು!
- ಈ ಸಂದರ್ಭದಲ್ಲಿ ಸ್ವಾರಸ್ಯಕರವಾದೊಂದು ಪತ್ರವ್ಯವಹಾರದ ವಿಷಯ ನಿನಗೆ ಬರೆಯಬೇಕು. ಇದು ನಡೆದುದು ‘ಪ್ರಜಾವಾಣಿ’ಯಲ್ಲಿ. ಆ ಪತ್ರ ವ್ಯವಹಾರ, ಮರೆತುಹೋಗಿ ಆಗುವ ಪ್ರಮಾದಗಳಿಗೆ ಸಂಬಂಧಿಸಿದ್ದು. ಈ ಪತ್ರಿಕೆಯಲ್ಲಿ ‘ವಾಚಕರ ವಾಣಿ’ ಎಂಬ ವಿಭಾಗವಿದೆ. ಇಲ್ಲಿ ಕಲೆ-ಸಾಹಿತ್ಯ-ಕೆಂಗಲ್ ಹನುಮಂತಯ್ಯ ರಸ್ತೆ-ಮೋಟರ್ ಅಪಘಾತ, ಮದ್ಯಪಾನ ನಿಷೇಧ-ಪಕ್ಷ ರಾಜಕೀಯ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಓದುಗರ ಓಲೆಗಳು ಪ್ರಕಟವಾಗುತ್ತವೆ.
- ಕೆಲವು ದಿನಗಳ ಹಿಂದೆ ಈ ವಿಭಾಗದಲ್ಲಿ ‘ಮಗನೋ ಮೊಮ್ಮೊಗನೋ?’ ಎಂಬ ಶೀರ್ಷಿಕೆಯನ್ನು ಕಂಡೆ. ಕುತೂಹಲದಿಂದ ಅದರ ಕೆಳಗಿದ್ದುದನ್ನೋದಿದೆ. ಬಿ.ವಿ.ಮೂರ್ತಿ ಎಂಬುವರು ಬರೆದ ಆ ಕಾಗದ ಹೀಗಿತ್ತು:
ಸ್ವಾಮಿ, ಮಾಧ್ಯಮಿಕ ಶಾಲೆಯ ೪ನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ೧೨ನೇ ಪುಟದ ೧೪ನೇ ಸಾಲಿನಲ್ಲಿ "ಹಿಂದೆ ಬಲಿಯು ತನ್ನ ತಂದೆಯಾದ ಪ್ರಹ್ಲಾದನನ್ನು ‘ಕ್ಷಮೆ ಒಳ್ಳೆಯದೇ’ ಎಂದು ಕೇಳಿದನಂತೆ.." ಎಂದು ಮುಂತಾಗಿ ಉಲ್ಲೇಖಿಸಿದೆ. ಇದನ್ನು ಶ್ರೀ ಎ.ಆರ್.ಕೃಷ್ಣಶಾಸ್ತ್ರಿ ಅವರ ವಚನ ಭಾರತದಿಂದ ಆಯ್ದು ಕೊಳ್ಳಲಾಗಿದೆಯೆಂದು ಪಠ್ಯ ಪುಸ್ತಕದ ಸಂಪಾದಕರು ನಿವೇದಿಸಿಕೊಂಡಿದ್ದಾರೆ. ಶ್ರೀ ಶಾಸ್ತ್ರಿಗಳ "ವಚನ ಭಾರತ"ದ ೧೧೯ ನೇ ಪುಟದ ೨೭ ನೇ ಸಾಲಿನಲ್ಲಿ ಮೇಲಿನಂತೆ ಉಲ್ಲೇಖಿಸಲಾಗಿದೆ. ವ್ಯಾಸ ಮುನಿಯ ಮಹಾಭಾರತವನ್ನು ಕನ್ನಡಕ್ಕೆ ತಂದ ಶ್ರೀ ಪಂಡಿತ ದೇವಶಿಖಾಮಣಿ ಅಳಸಿಂಗ್ರಾಚಾರ್ಯರು ಭಾರತದಲ್ಲಿ ಸಂಭವಪರ್ವ [ಆದಿಪರ್ವ ಎರಡನೆಯ ಭಾಗ] ೩೧೮ ನೇ ಪುಟದ ೨೬ ನೇ ಸಾಲಿನಲ್ಲಿ "ಪ್ರಹ್ಲಾದನಿಗೆ ವಿಮೋಚನ, ಕುಂಭ ಮತ್ತು ನಿಕುಂಭರೆಂಬ ಮೂರು ಮಂದಿ ಪುತ್ರರಾದರು. ಇವರು ಬಹಳ ಪ್ರಖ್ಯಾತಿಗೊಂಡವರು. ವಿಮೋಚನ ನಿಗೆ ಮಹಾಪರಾಕ್ರಮಿಯಾದ ಬಲಿ ಚಕ್ರವರ್ತಿಯೊಬ್ಬನೇ ಮಗನು.." ಎಂದು ಹೇಳಲಾಗಿದೆ. ಅಂದರೆ, ಬಲಿ ಪ್ರಹ್ಲಾದನ ಮಗನೋ, ಮೊಮ್ಮೊಗನೋ? ಬಲ್ಲವರು ತಿಳಿಸಬೇಕು.
- ಬಿ.ವಿ.ಮೂರ್ತಿ ಎ.ಆರ್.ಕೃಷ್ಣಶಾಸ್ತ್ರಿಯವರಿಂದ ಆಗಿರಬಹುದಾದ ಪ್ರಮಾದಕ್ಕೆ ಸಂಬಂಧಿಸಿ ಓದುಗರಿಂದ ಓಲೆ! ಸೋಮಾರಿಯಾದ ನಾನು ಸ್ವತಃ ಸತ್ಯಾನ್ವೇಷಣೆಗೆ ಹೋಗದೆ, ಬಲ್ಲವರು ಯಾರಾದರೂ ಹೇಳಬಹುದೆಂದು ಇಮ್ಮಡಿ ಕುತೂಹಲದಿಂದ ಕಾದು ಕುಳಿತೆ. ಅದಾಗಿ ಕೆಲವು ದಿನಗಳ ಬಳಿಕೆ ಅದೇ ವಿಭಾಗದಲ್ಲಿ ‘ಮಗನಲ್ಲ, ಮೊಮ್ಮಗ’ ಎಂಬ ಶೀರ್ಷಿಕೆ ಕಣ್ಣಿಗೆ ಬಿತ್ತು. ಅದರಡಿಯಲ್ಲಿ ಎರಡು ಓಲೆಗಳಿದ್ದವು. ಒಂದನ್ನು ಸ್ವತಃ ಎ.ಆರ್.ಕೃಷ್ಣಶಾಸ್ತ್ರಿಯವರು ಬರೆದಿದ್ದರು. ಇನ್ನೊಂದನ್ನು ಎ.ಸುಬ್ರಹ್ಮಣ್ಯಂ ಎಂಬುವರು ಬರೆದಿದ್ದರು.
ಹೀಗಿತ್ತು ಎ.ಸುಬ್ರಹ್ಮಣ್ಯಂರವರ ಕಾಗದ: "ಸ್ವಾಮಿ, ತಮ್ಮ ೨೨-೧೦-೧೯೫೪ ರ ಪತ್ರಿಕೆಯಲ್ಲಿ ಬಿ.ವಿ.ಮೂರ್ತಿ ಎಂಬುವರು ಬಲಿಯು ಪ್ರಹ್ಲಾದನ ಮಗನೋ ಮೊಮ್ಮಗನೋ ಬಲ್ಲವರು ತಿಳಿಸಬೇಕು ಎಂಬುದಾಗಿ ವಾಚಕರ ಗಮನಕ್ಕೆ ತಂದಿರುವರು. ಈ ವಿಷಯವಾಗಿ ನನಗೆ ತಿಳಿದಿರುವಂತೆ ಮಹಾ ಭಾಗವತದಲ್ಲಿ ಷಷ್ಠಸ್ಕಂದ ೧೮ ನೇ ಅಧ್ಯಾಯದ ೫೯ ನೇ ಪೇಜಿನಲ್ಲಿ ಪ್ರಹ್ಲಾದನಿಗೆ ವಿಮೋಚನನೆಂಬ ಮಗನೂ ವಿಮೋಚನನಿಗೆ ಬಲಿ ಎಂಬ ಮಗನೂ ಸಿಂಹಿಕೆ ಎಂಬ ಮಗಳೂ ಹುಟ್ಟಿದರು ಎಂದಿರುತ್ತದೆ. ಮೂಲಾಧಾರವಾದ ಭಾಗವತ ಗ್ರಂಥದಿಂದ ಬಲಿಯು ಪ್ರಹ್ಲಾದನ ಮೊಮ್ಮಗನೆಂದು ಹೇಳಬಹುದು.
- ಎ.ಸುಬ್ರಹ್ಮಣ್ಯಂ" ಓದುಗರೊಬ್ಬರು ತಮ್ಮ ತಿಳಿವಳಿಕೆಯಿಂದ ಹೀಗೆ ಬರೆದರಲ್ಲಾ ಎಂದು ನನಗೆ ಸಂತೋಷವಾಯಿತು. ಅಷ್ಟರಲ್ಲೇ ಬಿ.ವಿ.ಮೂರ್ತಿಯವರ ಓಲೆಗೆ ಉತ್ತರವಾಗಿ ಸ್ವತಃ ಕೃಷ್ಣಶಾಸ್ತ್ರಿಯವರೇ ಬರೆದಿದ್ದರು:
"ಸ್ವಾಮಿ, ಶ್ರೀ ಬಿ.ವಿ.ಮೂರ್ತಿಯವರು ‘ವಚನ ಭಾರತ’ದಲ್ಲಿರುವ ಒಂದು ತಪ್ಪನ್ನು ತೋರಿಸಿಕೊಟ್ಟುದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಬಲಿಯು ವಿಮೋಚನನ ಮಗ, ಪ್ರಹ್ಲಾದನ ಮೊಮ್ಮಗ. ಸಂಸ್ಕೃತ ಮೂಲದಲ್ಲಿ ‘ಪ್ರಹ್ಲಾದಂ ವಿತರಂ ಪಿತುಃ’ ಎಂದಿದೆ. ಈ ತಪ್ಪನ್ನು ಮುಂದಿನ ಮುದ್ರಣದಲ್ಲಿ ತಿದ್ದಿಕೊಳ್ಳುತ್ತೇನೆ.
- ಎ.ಆರ್.ಕೃಷ್ಣಶಾಸ್ತ್ರಿ" ನಿಜಾಂಶ ತಿಳಿಯಿತು. ಕನ್ನಡದ ಹಿರಿಯ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ ಸಂಪಾದಕರಿಗೆ ಬರೆದ ನಾಲ್ಕು ವಾಕ್ಯಗಳ ಓಲೆ. ಆ ವಿನಯ.. ಅದನ್ನೋದುತ್ತ ವಿವರಿಸಲಾಗದಂತಹ ಅನುಭವ ನನಗಾಯಿತು. ಕನ್ನಡದ ದೊಡ್ಡ ವಿದ್ವಾಂಸರೊಬ್ಬರಿಂದ ಸಣ್ಣ ತಪ್ಪಾಯಿತೆಂಬುದು ಮಹತ್ವದ ವಿಷಯವಲ್ಲ. ಆದರೆ ‘ತಪ್ಪಾಯಿತು, ತಿದ್ದಿಕೊಳ್ಳುತ್ತೇನೆ’ ಎನ್ನುವ ವಿನಯಶೀಲತೆ ಮಹತ್ವದ್ದು. ಆ ಮಾತಿನ ಹಿಂದಿನ ಮನೋಭಾವ ಮಹತ್ವದ್ದು..
ನಮ್ಮ ಎಲ್ಲ ಸಾಹಿತಿಗಳೂ ಹೀಗೆ ವಿನಯ ಗುಣ ಸಂಪನ್ನರಾದರೆ ಎಷ್ಟೊಂದು ಒಳಿತಾದೀತು! ಬಿ.ವಿ.ಮೂರ್ತಿಯವರು.. ಈ ಮಹಾನುಭಾವ ಯಾರೋ ನನಗೆ ತಿಳಿಯದು. ಆದರೆ, ಮಗನೋ ಮೊಮ್ಮಗನೋ .... ಸಮಸ್ಯೆಯ ಇತ್ಯರ್ಥದೊಡನೆ ಅವರು ಸುಮ್ಮನಾಗುವರೆಂದು ಭಾವಿಸುವುದು ಮಾತ್ರ ತಪ್ಪಾದೀತು! ಎಂ.ಆರ್.ಶ್ರೀಯವರ ಅಧ್ಯಕ್ಷತೆಯಲ್ಲಿ ೧೯೫೨ ರಲ್ಲಿ ಪ್ರಕಟವಾದ ಪ್ರಾಥಮಿಕ ಶಾಲೆಯ ಎರಡನೆಯ ತರಗತಿ ಪಠ್ಯ ಪುಸ್ತಕದಲ್ಲಿ, ಸುಮಿತ್ರೆ ದಶರಥನ ಎರಡನೆಯ ಹೆಂಡತಿ ಎಂದಿದೆಯಂತೆ. ಆದರೆ, ಬೊಂಬಾಯಿಯ ಭಾರತೀಯ ವಿದ್ಯಾಭವನದವರು ಪ್ರಕಟಿಸಿರುವ ‘ವಾಲ್ಮೀಕಿ ರಾಮಾಯಣ ’ದ ಆಂಗ್ಲಾನುವಾದದಲ್ಲಿ ಸುಮಿತ್ರೆ ದಶರಥನ ಮೂರನೆಯ ಮಡದಿ ಎಂದಿದೆಯಂತೆ.
ಆದರೆ ನಿಜವಾಗಿ ಸುಮಿತ್ರೆ ಎಷ್ಟನೆಯ ಮಡದಿ? .... ಇದೀಗ ಬಿ.ವಿ.ಮೂರ್ತಿಯವರ ಪ್ರಶ್ನೆ. ಪ್ರಾಜ್ಞರು ತಿಳಿಸಬೇಕೆಂದು ಅವರು ಕೇಳಿದ್ದಾರೆ.
ರಾಮಾಯಣಕ್ಕೆ ಸಂಬಂಧಿಸಿ ಒಮ್ಮೆ ತಪ್ಪು ಮಾಡಿದ ಮೇಲೆ ಈ ವಿಷಯವಾಗಿ ಮಾತನಾಡಲು ನನಗೆ ಒಂದು ರೀತಿಯ ಅಳುಕು. ಆದರೂ ನೆನಪು ಹೇಳುತ್ತಿದೆ. ಕೈಕೆಯೇ ಕಿರಿಯ ಹೆಂಡತಿ; ಕಿರಿಯ ಹೆಂಡತಿಯ ಬಲೆಗೆ ದಶರಥ ಬಿದ್ದುದರಿಂದಲೇ ರಾಮಾಯಣದ ಕಥೆ ಸಾಧ್ಯವಾಯಿತು. ಕೌಸಲ್ಯೆಯಂತೂ ಪಟ್ಟದ ರಾಣಿಯಾದುದರಿಮ್ದ ಸುಮಿತ್ರೆ ಎರಡನೆಯವಳೇ ಆಗಿರಬೇಕು.
ಆದರೆ ಇದು ಪ್ರಾಜ್ಞರ ಉತ್ತರವಲ್ಲ! ಈ ಮಡದಿಯರ ವಿಷಯ.. ನಿನಗೇನಾದರೂ ಗೊತ್ತೆ ಒಡತಿ? "ದಶರಥ ಮೂರು ಮದುವೆ ಮಾಡಿಕೊಂಡುದೇ ಉಂಟಂತೆ. ಸುಮಿತ್ರೆ ಎರಡನೆಯವಳಾದರೇನು? ಮೂರನೆಯವಳಾದರೇನು?" ಎನ್ನಬೇಡ ಸದ್ಯ!
ನಾನಂತೂ ಮತ್ತೊಮ್ಮೆ ರಾಮಾಯಣವನ್ನು ಅಭ್ಯಸಿಸಬೇಕೆಂದು ನಿರ್ಧರಿಸಿದ್ದೇನೆ. ಕುವೆಂಪುಕೃತ "ಜನಪ್ರಿಯ ವಾಲ್ಮೀಕಿ ರಾಮಾಯಣ"ವನ್ನು ಓದಿಗೆ ಮೊದಲ ಪೀಠಿಕೆಯಾಗಿ ಕೊಂಡು ತಂದಿದ್ದೇನೆ. ನಿನಗೂ ಬೇಕಿದ್ದರೆ ಹೇಳು. "ಬೇಡ, ಇಲ್ಲಿಯ ರಾಮಾಯಣವೇ ಸಾಕಾಗಿದೆ" ಎನ್ನುವಿ ಯೇನೋ.
ಅಂತೂ ಇದೀಗ ಮರೆತು ಹೋಗುವುದರ ಪರಿಣಾಮ, ಎಂತಹ ಅವಾಂತರಗಳು! ಈ ಬಿ.ವಿ.ಮೂರ್ತಿಯವರೂ ಅವರಂತಹ ಬೇರೆ ಕೆಲವರೂ ಇದೇ ರೀತಿಯಾಗಿ ಎಕ್ಸ್ ರೇ ಪ್ರಯೋಗವನ್ನು ಇನ್ನೂ ನಡಸಿದ್ದೇ ಆದರೆ, ಗತಕಾಲದ ಸಾಹಿತ್ಯವನ್ನು ತಿಂದು ನೀರು ಕುಡಿದಿರುವ ಭಾರತದ ಜಠರದಲ್ಲಿ ಅದೇನೇನನ್ನು ಅವರು ಕಾಣುವರೊ!
... ಒಪ್ಪಿದೆ. ಮರೆಯುವುದು ತಪ್ಪು. ಇಗೋ ಕೈ ಚಾಚು. ವಾಗ್ದಾನ ತಗೋ. ಬೇಕಾದುದನ್ನು, ಒಳ್ಲೆಯದನ್ನು, ಎಂದೂ ಮರೆಯದಂತೆ ಎಚ್ಚರದಿಂದಲೆ ಇರುವೆ.
ಲೇಖನ ಸಂಕಲನ
[ಬದಲಾಯಿಸಿ]- ಐದು ನಿಮಿಷ (1953)
- ಕಾಲಕ್ಷೇಪ (1957)
ಭಾಷಾಂತರ
[ಬದಲಾಯಿಸಿ]- ತಾಯಿ
- ನೀತಿಕತೆಗಳು
- ನನ್ನ ಬಾಲ್ಯ
- ಮದುವಣಗಿತ್ತಿ
- ಅಧ:ಪತನ
ಅಂಕಣ ಬರಹಗಳು
[ಬದಲಾಯಿಸಿ]- ಐದು ನಿಮಿಷ
- ಕಾಲಕ್ಷೇಪ
- ಸಾಧನಾ
- ಪುಷ್ಪಹಾರ
ಹೀಗೆ ಇಪ್ಪತೈದು ಕಾದಂಬರಿಗಳನ್ನು ಬರೆದರು. ಹನ್ನೊಂದು ಕಥಾಸಂಕಲನಗಳು. ಜೀವನ ವೃತ್ತಗಳು ಎರಡು. ಇವಲ್ಲದೇ, ವ್ಯಕ್ತಿ ಚಿತ್ರ ಸಂಕಲನಗಳು, ರಾಜಕೀಯ ಲೇಖನಗಳು,ಭಾಷಾಂತರಗಳು, ಸಂಪಾದಿತ ಕೃತಿಗಳು .....ಹೀಗೆ ಹಲವಾರು.[೨][೩]
ಹೆಚ್ಚಿನ ಓದಿಗೆ
[ಬದಲಾಯಿಸಿ]- ನಿರಂಜನರ ಮರು ಓದಿಗೆ ದಿಲ್ಲಿ ಕನ್ನಡಿಗರ ಚಾಲನೆ
- ನಿರಂಜನರ 'ಚಿರಸ್ಮರಣೆ' |ಕಯ್ಯೂರಿಗೆ ಕೈ ಮುಗಿದು...;ರಾಧಾಕೃಷ್ಣ ಬೆಳ್ಳೂರು;d: 07 ಜೂನ್ 2020,
ಪ್ರಶಸ್ತಿ
[ಬದಲಾಯಿಸಿ]- ಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿ.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಸಂಧಿಕಾಲ - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಓದಲು ಸಿಗುವ ಕಥಾಸಂಕಲನ
ಇವುಗಳನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]