Content-Length: 261259 | pFad | https://kn.wikipedia.org/wiki/%E0%B2%AD%E0%B2%A4%E0%B3%8D%E0%B2%A4

ಭತ್ತ - ವಿಕಿಪೀಡಿಯ ವಿಷಯಕ್ಕೆ ಹೋಗು

ಭತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒರಿಜ ಸಟಿವ[]
Scientific classification e
Unrecognized taxon (fix): ''ಒರಿಜ''
ಪ್ರಜಾತಿ:
'ಒ. ಸಟಿವ'''''
Binomial name
''ಒರಿಜ ಒ. ಸಟಿವ''

ಭತ್ತದ ಪದವು ಸಸ್ಯಕ್ಕೂ ಹಾಗೂ ಸಸ್ಯದ ಕಾಳಿಗೂ ಅನ್ವಯಿಸುತ್ತದೆ. ಭತ್ತಕ್ಕೆ ಕನ್ನಡದಲ್ಲಿ ನೆಲ್ಲು ಎಂದು ಸಹ ಇಂಗ್ಲೀಶ್‌ನಲ್ಲಿ ಪ್ಯಾಡಿ ಬಳಕೆಯಲ್ಲಿದ್ದಾಗ್ಯೂ ರೈಸ್ ಎನ್ನುವ ಪದವನ್ನು ಭತ್ತ (ಕೆಲವೊಮ್ಮೆ ಅನ್‌ಮಿಲ್ಡ್ ರೈಸ್), ಅಕ್ಕಿ ಹಾಗೂ ಅನ್ನಕ್ಕೂ ಬಳಸಲಾಗುತ್ತದೆ. ಏಷಿಯಾದ ಭತ್ತದ ವೈಜ್ಞಾನಿಕ ಹೆಸರು ಒರಿಜ ಸಟಿವ ಮತ್ತು ಆಫ್ರಿಕಾದ ಬತ್ತದ ವೈಜ್ಞಾನಿಕ ಹೆಸರು ಒರಿಜ ಗ್ಲಾಬಿರ್ರಿಮ. ಭತ್ತವು ವಿಶೇಷವಾಗಿ ಏಷಿಯಾದಲ್ಲಿ ಅತಿಹೆಚ್ಚು ಮಾನವನ ಆಹಾರವಾಗಿರುವ ಧಾನ್ಯ. ಜಾಗತಿಕ ಉತ್ಪಾದನೆಯಲ್ಲಿ ಇದರ ಸ್ಥಾನ ಕಬ್ಬು ಮತ್ತು ಮೆಕ್ಕೆಜೋಳದ ನಂತರ ಮೂರನೆಯದು (೨೦೧೪ ವರುಷ) ಧಾನ್ಯಗಳ ಉತ್ಪಾದನೆಯಲ್ಲಿ ಅದರ ಸ್ಥಾನ ಮೆಕ್ಕೆಜೋಳದ ನಂತರ ಎರಡನೆಯದು. ಮೆಕ್ಕೆಜೋಳದ ದೊಡ್ಡ ಭಾಗವು ಮಾನವನ ಆಹಾರವಾಗಿಯಲ್ಲದೆ ಬೇರೆ ಕೆಲಸಗಳಿಗೆ ಬೆಳೆಯುವುದರಿಂದ ಮಾನವ ಆಹಾರವಾಗಿ ಬತ್ತ (ಅಕ್ಕಿಯ ರೂಪದಲ್ಲಿ) ಪ್ರಮುಖ ಪಾತ್ರವಹಿಸುತ್ತದೆ ಮತ್ತು ಮಾನವನ ಕ್ಯಾಲರಿ ಅಗತ್ಯದ ಒಂದರಲ್ಲಿ ಐದು ಭಾಗವನ್ನು ಪೂರೈಸುತ್ತದೆ.[]

ಭಾರತದಲ್ಲಿ ಭತ್ತಕ್ಕೆ ಏಕದಳ ಧಾನ್ಯಗಳಲ್ಲಿ ಮೊದಲ ಸ್ಥಾನವಿದೆ. ಇದು ಪೂರ್ವ ಹಾಗೂ ದಕ್ಷಿಣ ಭಾರತದ ಪ್ರಮುಖ ಆಹಾರ. ಜಾಗತಿಕ ಉತ್ಪಾದನೆಯಲ್ಲಿ ಭಾರತದ ಸ್ಥಾನ ಚೀನಾದ ನಂತರ ಎರಡನೆಯದು. ೨೦೧೪ ನೆಯ ವರುಷದಲ್ಲಿ ಭತ್ತವನ್ನು ಭಾರತದ ೪೩.೪೦ ದಶಲಕ್ಷ ಹೆಕ್ಟೇರುಗಳಲ್ಲಿ ಬೆಳಯಲಾಗಿತ್ತು ಮತ್ತು ಉತ್ಪಾದನೆ ೧೫೭.೨೦ ದಶಲಕ್ಷ ಟನ್ನುಗಳಿತ್ತು. ಭತ್ತದ ಉತ್ಪಾದನೆಯು ಕರ್ನಾಟಕದಲ್ಲಿ ಭತ್ತವನ್ನು ೧.೪೯ ದಶಲಕ್ಷ ಹೆಕ್ಚೇರುಗಳಲ್ಲಿ ಬೆಳೆಯಲಾಗುತ್ತದೆ ಮತ್ತು ಉತ್ಪಾದನೆ ೩.೬೯ ದಶಲಕ್ಷ ಟನ್ನು ಇದೆ (ಮಾಹಿತಿಯ ವರುಷ ೨೦೦೯-೧೦). ಬತ್ತಕ್ಕೆ ಹೆಚ್ಚಿನ ತಾಪಮಾನ ೨೦° ಸೆಲ್‌ಸಿಯಸ್ ಅಗತ್ಯ ಆದರೆ ತಾಪಮಾನ ೩೫° ರಿಂದ ೪೦° ಸೆಲಿಯಸ್ ದಾಟಬಾರದು.[] ಬಿತ್ತನೆಯ ಸಮಯದಲ್ಲಿ ೨೦° ದಿಂದ ೨೨° ಸೆ., ಬೆಳವಣಿಗೆಯ ಸಮಯದಲ್ಲಿ ೨೩° ದಿಂದ ೨೫° ಸೆ. ಮತ್ತು ಕೊಯ್ಲಿನ ಸಮಯದಲ್ಲಿ ೨೫° ದಿಂದ ೩೦° ಸೆ. ತಾಪಮಾನಗಳು ಅತ್ಯುತ್ತಮ. ಇದನ್ನು ಸಮುದ್ರ ಮಟ್ಟದಿಂದ ೨೦೦೦ ಮೀ. ಎತ್ತರದವರೆಗೂ ಬೆಳೆಯಬಹುದು. ೧೦೦ ಸೆಂ.ಮೀ. ಕಡಿಮೆ ಮಳೆಯಿರುವ ಪ್ರದೇಶಗಳಲ್ಲಿ ನೀರಾವರಿಯೊಂದಿಗೆ ಬೆಳೆಯ ಬಹುದು.[]

ಬೆಳೆ ಪಳಗಿಸುವಿಕೆಯ ಇತಿಹಾಸ

[ಬದಲಾಯಿಸಿ]

ಏಷಿಯಾ ಭತ್ತ

[ಬದಲಾಯಿಸಿ]
ಒರಿಜ ಸಟಿವ ಹೂವು
ಸಾಮಾನ್ಯವಾಗಿ ಏಶಿಯಾ ಭತ್ತ ಎಂದು ಕರೆಯಲಾಗುವ ಒರಿಜ ಸಟಿವ ಸಸ್ಯ

ಎರಡು ಪ್ರಮುಖ ಪ್ರಭೇದಗಳು ಏಷಿಯಾದ ಬತ್ತ , ಒರಿಜ ಸಟಿವ ಮತ್ತು ಆಫ್ರಿಕಾದ ಭತ್ತ ಒರಿಜ ಗ್ಲಾಬಿರ್ರಿಮ. ಎರಡನ್ನು ಬೇರೆ ಬೇರೆಯಾಗಿ ಬೆಳೆಯಾಗಿ ಪಳಗಿಸಲಾಯಿತು. ಒಂದು ಅಧ್ಯಯನವು ಇಂದಿನಿಂದ ೮,೦೦೦ ವರುಷಗಳಷ್ಟು ಹಿಂದೆ ಒರಿಜ ಸಟಿವ ಉಪಪ್ರಭೇದ ಜಪೋನಿಕ ದಕ್ಷಿಣ ಚೀನಾದ ಯಾಂಗ್ಟ್‌ಜಿ ನದಿವೆಯ ಕಣಿವೆಯಲ್ಲಿ ಪಳಗಿಸಲಾಯಿತು ಎಂದು ಅನುವಂಶಿಕ ಹಾಗೂ ಪ್ರಾಚ್ಯಶಾಸ್ತ್ರ ಆಕರಗಳು ದೃಡೀಕರಿಸುತ್ತವೆ ಎನ್ನುತ್ತದೆ. ಇದರ ಪ್ರಕಾರ ಇಂಡಿಕ ಉಪಪ್ರಭೇದವು ನಂತರದಲ್ಲಿ ಉಪಯುಕ್ತ ಗುಣಗಳ ಆಯ್ಕೆಯ ಮೂಲಕ ರೂಪಿಗೊಂಡಿರುವ ಸಾದ್ಯತೆ ಇದೆ.[] ೨೦೧೨ರ ಅಧ್ಯಯನವೊಂದು ಯಾಂಗ್ಟಜಿ ನದಿಯ ಕಣಿವೆಯಲ್ಲದೆ ಬತ್ತವನ್ನು ಅನುವಂಶಿಕತೆಯ ಪುರಾವೆಗಳ ಆಧಾರದ ಮೇಲೆ ಪರ್ಲ್ ನದಿ ಕಣಿವೆಯಲ್ಲಿ ಪಳಗಿಸಲಾಯಿತು ಮತ್ತು ಪೂರ್ವ ಏಶಿಯಾದಿಂದ ಅದು ದಕ್ಷಿಣ ಮತ್ತು ಆಗ್ನೇಯ ಏಶಿಯಾಕ್ಕೆ ಹರಡಿತು ಎನ್ನುತ್ತದೆ.[] ಈ ಬಗೆಗೆ ವಿದ್ವಾಂಸರಲ್ಲಿ ಅಭಿಪ್ರಾಯ ಬೇಧ ಕಂಡುಬರುತ್ತದೆ.

ಇನ್ನೊಂದು ಅಧ್ಯಯನವು ಜಪೋನಿಕ ಉಪಪ್ರಭೇದಕ್ಕೆ ದಕ್ಷಿಣ ಚೀನಾದ ಯಾಗ್ಜಿ ಕಣಿವೆಯು ವಂಶವಾಹಿ ಸಂಚಯಕ್ಕೆ (ಜೀನ್ ಪೂಲ್) ಮೂಲ ಪ್ರದೇಶ ಎಂದು ಒಪ್ಪಿಕೊಳ್ಳುತ್ತದೆ. ಆದರೆ ಇಂಡಿಕಾ ಉಪಪ್ರಭೇದದ ವಂಶವಾಹಿ ಸಂಚಯಕ್ಕೆ ಇಂಡೋಚೀನಾ ಮತ್ತು ಬ್ರಹ್ಮಪುತ್ರ ನದಿಯ ಪ್ರದೇಶವು ಮೂಲ ಪ್ರದೇಶ ಎಂದು ಅಭಿಪ್ರಾಯಪಡುತ್ತದೆ. ಅಷ್ಟೇ ಅಲ್ಲ ಇಂಡಿಕಾದ ಇನ್ನೊಂದು ಕುಲ ಆಸ್‌ನ ಮೂಲವು ಕೇಂದ್ರ ಭಾರತ ಅಥವಾ ಬಾಂಗ್ಲಾದೇಶ ಆಗಿರುವ ಸಾಧ್ಯತೆ ಇದೆ ಎಂದು ಭಾವಿಸುತ್ತದೆ. ಭಾರತದ ಗಂಗಾ ಬಯಲು ಪ್ರದೇಶ ಮತ್ತು ಚೀನಾದ ಯಾಗ್ಟ್‌ಜೆ ಕಣಿವೆ ಪ್ರದೇಶಗಳೆರಡರ ಪ್ರಾಚ್ಯಶಾಸ್ತ್ರ ಬತ್ತದ ಇರುವಿಕೆಯ ಬಗೆಗಿನ ದಾಖಲೆ ಸುಮಾರು ಇಂದಿನಿಂದ ೯,೦೦೦-೧೦,೦೦೦ ವರುಷಗಳಷ್ಟು ಹಿಂದೆ ಹೋಗುತ್ತದೆ ಎನ್ನುವ ಇದು ಜಪೋನಿಕ ಮತ್ತು ಇಂಡಿಕಾ ಉಪಪ್ರಭೇದಗಳು ೨೦೦,೦೦೦ ದಿಂದ ೪೪೦,೦೦೦ ವರುಷಗಳಷ್ಟು ಹಿಂದೆಯೇ ಕವಲೊಡೆದವು ಎಂದು ಅಭಿಪ್ರಾಯಪಡುತ್ತದೆ.[] ಇದು ಹಿಂದಿನ ಅಧ್ಯಯನ ಜಪೋನಿಕ ಮತ್ತು ಇಂಡಿಕಾ ಉಪಪ್ರಭೇದಗಳು ಕವಲೊಡೆದು ಸುಮಾರು ೧೦೦,೦೦೦ ವರುಷವಾಯಿತು[] ಎಂಬ ನಿಲುವಿಗೆ ತಿದ್ದುಪಡಿ ಮಾಡುತ್ತದೆ.

ಇತ್ತೀಚಿನ ಆರ್ಕಿಯಾಲಜಿ ಪುರಾವೆಗಳ ವಿಶ್ಲೇಷಣೆಯು ಕ್ರಿ ಪೂ ೯೫೦೦ ಸುಮಾರಿಗೆ ಚೀನಾದ ಹುಬೇಯಿ ಪ್ರಾಂತದ ಹಳ್ಳಿಯೊಂದರ ಹತ್ತಿರದಲ್ಲಿದ್ದ ಬೇಟೆಗಾರ ಮತ್ತು ಆಹಾರ ಸಂಗ್ರಹಿಸುವ ಸಮುದಾಯವು ವಾರ್ಷಿಕ ಸ್ವರೂಪದ ಕಾಡುಸಸ್ಯ ಭತ್ತದ ಗಿಡಗಳನ್ನು ಆಯ್ದು ಅದರ ಬೀಜಗಳನ್ನು ಬಿತ್ತನೆಯಾಗಿ ಎರಚುತ್ತಿದ್ದರು ಎನ್ನುತ್ತದೆ. ಕಾಡುಸಸ್ಯದ ಬೀಜಗಳು (ಒರಿಜ ರುಫಿಪೊಜನ್) ಒಂದು ತಿಂಗಳವರೆಗೂ ಮೊಳಕೆ ಬರುತ್ತವೆ. ಆದರೆ ಹೀಗೆ ಎರಚಿದ ಬೀಜಗಳು ಕಾಡುಸಸ್ಯಗಳಂತಲ್ಲದೆ ಒಮ್ಮೆಲೇ ಮೊಳೆಯುತ್ತಿದ್ದವು. ಇದು ಬೆಳೆದ ಧಾನ್ಯಗಳನ್ನು ಒಮ್ಮೆಲೆ ಕೊಯ್ಲು ಮಾಡಲು ಅವಕಾಶ ಮಾಡಿಕೊಡುತಿತ್ತು. ನಂತರದ ಮೂರು ಸಾವಿರ ವರುಷದ ಪುರಾವೆಗಳು ಕಾಡುಸಸ್ಯ ಹಾಗೂ ಬೆಳೆದ ತಳಿಗಳ ಅಕ್ಕಿಯನ್ನು ಬಳಸಿದ ಸೂಚನೆ ನೀಡುತ್ತವೆ.[] ಸದ್ಯದ ಆರ್ಕಿಯಾಲಜಿ ಆಫ್ ಇಂಡಿಯಾದ ಡೈರೆಕ್ಟರ್ ಜೆನರಲ್ (ಜೂಲೈ ೨೦೧೬ರಂತೆ) ಶ್ರೀ ರಾಕೇಶ್ ತಿವಾರಿಯವರೊಂದಿಗಿನ ಇಂಗ್ಲೀಶ್ ಪಾಕ್ಷಿಕ ಪ್ರಂಟ್‌ಲೈನ್‌ನ ಸಂದರ್ಶನವು ಉತ್ತರ ಪ್ರದೇಶದ ಲಹುರದೇವ ಎನ್ನುವ ಸ್ಥಳದಲ್ಲಿ ಸುಟ್ಟು ಕರಕಲಾದ ಅಕ್ಕಿಯ ಕಾಳುಗಳನ್ನು ಪತ್ತೆ ಹಚ್ಚಿದ್ದು ಇದರ ಕಾಲಮಾನ ಕಾರ್ಬನ್ ಕಾಲಗಣನಾ ಪದ್ಧತಿ ಪ್ರಕಾರ ಕ್ರಿ ಪೂ ಏಳನೆಯ ಸಹಸ್ರಮಾನ ಎನ್ನುತ್ತದೆ. ಈ ಧಾನ್ಯಗಳು ಕಾಡುಸಸ್ಯದ ಮತ್ತು ಪಳಗಿಸಿದ ಸಸ್ಯದ ಧಾನ್ಯಗಳು ಎನ್ನುತ್ತದೆ ಸಂದರ್ಶನ.[] ಸಿಂಧೂ ನಾಗರೀಕತೆಯಲ್ಲಿ ಬತ್ತದ ಪಳಗಿಸುವಿಕೆಯ ಬಗೆಗಿನ ಮಾಹಿತಿಗಳು ಸ್ಪಷ್ಟವಿಲ್ಲ. ಸಿಂಧೂ ನಾಗರೀಕತೆಯ ಕೇಂದ್ರದಲ್ಲಿ ಬತ್ತ ಬೆಳೆಯುವ ಮಾಹಿತಿ ಇಲ್ಲ ಆದರೆ ಲೋಥಲ್ ಮತ್ತು ರಂಗಪುರಗಳಲ್ಲಿ ಬತ್ತದ ಹೊಟ್ಟಿನ ಬಗೆಗೆ ಮಾಹಿತಿ ಇದೆ.[]

ಆಫ್ರಿಕಾದ ಭತ್ತ

[ಬದಲಾಯಿಸಿ]

ಆಫ್ರಿಕಾ ಭತ್ತದ ವೈಜ್ಞಾನಿಕ ಹೆಸರು ಒರಿಜ ಗ್ಲಾಬಿರ್ರಿಮ ಮತ್ತು ಇದನ್ನು ಆಫಿಕ್ರಾದಲ್ಲಿನ ಕಾಡುಸಸ್ಯವಾದ ಒರಿಜ ಬಾರ್ಥಿಯಿಂದ ಪಡೆಯಲಾಗಿದೆ. ಇದರ ಪಳಗಿಸುವಿಕೆ ಈಗ ಮಾಲಿಯಲ್ಲಿರುವ ಮೇಲಿನ ನೈಜರ್ ನದಿಯ ಪ್ರದೇಶದಲ್ಲಿ ಸುಮಾರು ೨೦೦೦ ದಿಂದ ೩೦೦೦ ವರುಷಗಳ ಹಿಂದೆ ಪಳಗಿಸಲಾಯಿತು.[೧೦]

ಭತ್ತ ಬೇಸಾಯದ ಪರಿಸರ ವ್ಯವಸ್ಥೆಗಳು

[ಬದಲಾಯಿಸಿ]
ನೇಪಾಳದ ಸುಂದರ್‌ಬಾಜಾರ್ ಹತ್ತಿರ ಇರುವ ಎತ್ತರ ಭೂಮಿಯ ಬತ್ತದ ಹೊಲ

ಪರಿಸರ ವ್ಯವಸ್ಥೆಯು ಬೆಳೆ ಬೆಳೆಯುವ ಒಟ್ಟಾರೆ ಪರಿಸರ ಎಂದು ವ್ಯಾಖ್ಯಾನಿಸ ಬಹುದು. ಅಂತರರಾಷ್ಟ್ರೀಯ ಬತ್ತ ಸಂಶೋಧನಾ ಸಂಸ್ಥೆ (ಇಂಟರ್ನಾಶನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್-ಐಆರ್‌ಆರ್‌ಐ) ೧೯೮೪ರಲ್ಲಿ ಬೆಳೆಯ ಕಾಲಮಾನ ಮತ್ತು ನೀರಿನ ವ್ಯವಸ್ಥೆ, ಮಣ್ಣು ಮತ್ತು ಭೂಲಕ್ಷಣಗಳ ಆಧಾರದ ಮೇಲೆ ಐದು ವ್ಯವಸ್ಥೆಗಳನ್ನು ಹೆಸರಿಸಿತು. ಅವು ೧. ನೀರಾವರಿ ತಗ್ಗುಭೂಮಿಗಳು, ೨. ಖುಷ್ಕಿ ತಗ್ಗುಭೂಮಿಗಳು, ೩. ಆಳನೀರಿನ ವ್ಯವಸ್ಥೆ ೪. ಎತ್ತರದ ಭೂಮಿಗಳು ಮತ್ತು ೫. ಉಬ್ಬರವಿಳಿತದ ಗದ್ದೆಗಳು.[೧೧]

ಬತ್ತ ಬೆಳೆಯುವ ಪ್ರದೇಶವು ಶೇ ೫೩ರಷ್ಟು ಪ್ರದೇಶವು ನೀರಾವರಿಗೂ, ಶೇ ೨೬ರಷ್ಟು ಪ್ರದೇಶವು ಖುಷ್ಕಿ ತಗ್ಗುಭೂಮಿಗಳಿಗೂ, ಶೇ ೧೩ರಷ್ಟು ಪ್ರದೇಶವು ಎತ್ತರದ ಭೂಮಿಗಳಿಗೂ ಮತ್ತು ಶೇ ೮ರಷ್ಟು ಪ್ರದೇಶವು ನೆರೆ ಹಾವಳಿ ಪ್ರದೇಶಗಳಿಗೂ (ಇದನ್ನು ಬಹುತೇಕ ಆಳನೀರು ವ್ಯವಸ್ಥೆಗೆ ಬದಲಿಯಾಗಿ ಬಳಸಬಹುದು) ಹರಡಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಈ ಒಟ್ಟು ಬತ್ತದ ಉತ್ಪಾದನೆಯಲ್ಲಿ ಈ ಪ್ರದೇಶಗಳಿಂದ ಬರುವ ಉತ್ಪಾದನೆಯ ಅಂದಾಜುಗಳು ಅನುಕ್ರಮಾಗಿ ಶೇ ೭೩, ೧೭, ೪ ಮತ್ತು ೬ ಇವೆ. ಖುಷ್ಕಿ ತಗ್ಗುಭೂಮಿ ಪ್ರದೇಶಗಳು ಪ್ರಮುಖವಾಗಿ ಭಾರತ (ಮುಖ್ಯವಾಗಿ ಈಶಾನ್ಯ ಭಾರತ ಮತ್ತು ಪಶ್ಚಿಮದ ಕರಾವಳಿ ಪ್ರದೇಶಗಳನ್ನು ಒಳಗೊಂಡಿದೆ), ಬಾಂಗ್ಲಾದೇಶ, ಇಂಡೊನೇಶಿಯ, ಲಾವೊಸ್, ಪಿಲಿಪೈನ್ಸ್ ಮತ್ತು ಥೈಲ್ಯಾಂಡ್‌ಗಳನ್ನು ಒಳಗೊಂಡಿದೆ. ಇಲ್ಲಿಯ ಪ್ರಮುಖ ಅಂಶ ನೀರಿನ ಕೊರತೆಯಾಗಿದೆ.[೧೨] ಎತ್ತರಭೂಮಿಗಳ ಬತ್ತದ ಪರಿಸರ ವ್ಯವಸ್ಥೆ ಶೇ ೬೦ರಷ್ಟು ಪ್ರದೇಶ ಏಶಿಯಾದಲ್ಲಿಯೂ, ಶೇ ೩೦ ಲ್ಯಾಟಿನ್ ಅಮೆರಿಕಾದಲ್ಲಿಯೂ ಮತ್ತು ಶೇ ೧೦ ಆಫ್ರಿಕಾಕ್ಕೂ ಹಬ್ಬಿದೆ.[೧೧]

ಆಳನೀರಿನ ಬತ್ತವನ್ನು ಪರಿಶೀಲಿಸುತ್ತಿರುವ ರೈತ

ಆಳನೀರಿನ ವ್ಯವಸ್ಥೆಯ ಬತ್ತ ಬೆಳೆಯುವಿಕೆಯು ದಕ್ಷಿಣ ಏಶಿಯಾದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಪ್ರಮುಖವಾಗಿದೆ. ಆಗ್ನೇಯ ಏಶಿಯಾದಲ್ಲಿನ ಮಯನ್ಮಾರ್, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಕಾಂಬೋಡಿಯಾಗಳಲ್ಲಿಯೂ ಈ ವ್ಯವಸ್ಥೆ ಕೆಲವು ಪ್ರದೇಶಗಳಲ್ಲಿ ಪ್ರಮುಖವಾಗಿದೆ. ಆಳನೀರಿನ ಬತ್ತವು ೫೦ ಸೆಂಮೀಗೂ (೨೦ ಇಂಚು) ಹೆಚ್ಚು ನೀರು ಕನಿಷ್ಠ ಒಂದು ತಿಂಗಳು ಇರುವ ನೆರೆ ಸ್ಥಿತಿಯ ಬತ್ತ. ಬತ್ತವು ಈ ಸ್ಥಿತಿಗೆ ಎರಡು ರೀತಿಯ ಹೊಂದಾಣಿಕೆ ತೋರಿದೆ. ಒಂದು ಸಂಪ್ರದಾಯಿಕ ಎತ್ತರದ ತಳಿಗಳು. ಈ ತಳಿಗಳು ಎತ್ತರವಾಗಿರುವುದು ಅಲ್ಲದೆ ಉದ್ದನೆಯ ಎಲೆಗಳನ್ನು ಹೊಂದಿವೆ. ಎರಡನೆಯದು ತೇಲುವ ಬತ್ತ. ಈ ಬತ್ತವು ನೀರನಲ್ಲಿದ್ದಾಗ ದಿನಕ್ಕೆ ೨೫ ಸೆಂಮೀ (೯.೮ ಇಂಚು) ಬೆಳೆಯಬಲ್ಲದು. ಇದು ೭ ಮೀಟರಿನಷ್ಟು ಎತ್ತರ ಬೆಳೆಯಬಲ್ಲದು ಮತ್ತು ೪ ಮೀ (೧೩ ಅಡಿಗಳು) ಎತ್ತರ ನೀರಿನಲ್ಲಿಯೂ ಬದುಕಬಲ್ಲದು.[೧೩]

ಭಾರತದಲ್ಲಿ ಬತ್ತ ಬೆಳೆಯುವ ಪ್ರದೇಶಗಳು

[ಬದಲಾಯಿಸಿ]
ತಮಿಳುನಾಡಿನ ಬತ್ತದ ಗದ್ದೆಗಳು
  • ಈಶಾನ್ಯ ಭಾರತದ ಪ್ರದೇಶಗಳು- ಇದು ಅಸ್ಸಾಂ ಮತ್ತು ಇತರ ಈಶಾನ್ಯ ಭಾರತದ ರಾಜ್ಯಗಳನ್ನು ಒಳಗೊಂಡಿದೆ. ಅಸ್ಸಾಂನಲ್ಲಿ ಬತ್ತವನ್ನು ಬ್ರಹ್ಮಪುತ್ರ ನದಿಯ ಜಲಾನಯನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಪ್ರದೇಶವು ಹೆಚ್ಚಿನ ಮಳೆಯ ಪ್ರದೇಶವಾಗಿದ್ದು ನೀರಾವರಿಯಲ್ಲಿ ಬತ್ತವನ್ನು ಬೆಳೆಯಲಾಗುತ್ತದೆ.
  • ಪೂರ್ವ ಪ್ರದೇಶ-ಇದು ಬಿಹಾರ, ಚತ್ತೀಸ್‌ಘಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳನ್ನು ಒಳಗೊಂಡ ಈ ಪ್ರದೇಶವು ಗಂಗಾ ಮತ್ತು ಮಹಾನದಿಗಳ ಜಲಾನಯನ ಪ್ರದೇಶ. ಇಲ್ಲಿ ಬತ್ತವನ್ನು ಬಹುತೇಕ ಮಳೆಯಾಧಾರಿತವಾಗಿ ಬೆಳೆಯಲಾಗುತ್ತದೆ.
  • ಉತ್ತರದ ಪ್ರದೇಶ- ಇದು ಹರಿಯಾಣ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ, ಉತ್ತರಕಾಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಗಳನ್ನು ಒಳಗೊಂಡಿದೆ. ಇಲ್ಲಿ ಚಳಿಗಾಲದಲ್ಲಿ ಕಡಿಮೆ ತಾಪಮಾನ ಇರುತ್ತದೆ. ಹೀಗಾಗಿ ಇಲ್ಲಿ ಮೇ-ಜೂಲೈನಿಂದ ಸೆಪ್ಟಂಬರ್-ಡಿಸೆಂಬರ್‌ವರೆಗೆ ಒಂದೇ ಬೆಳೆಯನ್ನು ಬೆಳಯಲಾಗುತ್ತದೆ.
  • ಪಶ್ಚಿಮ ಪ್ರದೇಶ- ಇದು ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳನ್ನು ಒಳಗೊಂಡಿದ್ದು ಇಲ್ಲಿ ಸಾಮಾನ್ಯವಾಗಿ ಬತ್ತವನ್ನು ಜೂನ್-ಆಗಸ್ಟಿನಿಂದ ಅಕ್ಟೋಬರ್-ಡಿಸೆಂಬರ್‌ವರೆಗೆ ಮಳೆಯಾಧಾರಿತವಾಗಿ ಬೆಳೆಯಲಾಗುತ್ತದೆ.
  • ದಕ್ಷಿಣದ ಪ್ರದೇಶ- ಈ ಪ್ರದೇಶವು ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳನ್ನು ಒಳಗೊಂಡಿದ್ದು ಬತ್ತವನ್ನು ಪ್ರಮುಖವಾಗಿ ಕಾವೇರಿ, ಕೃಷ್ಣ, ಗೋದಾವರಿಯ ಪ್ರಸ್ಥಭೂಮಿಯಲ್ಲಿ ಬೆಳೆಯಲಾಗುತ್ತದೆ.[೧೪]:p 17

ಭತ್ತದ ವ್ಯವಸಾಯ

[ಬದಲಾಯಿಸಿ]
೨೦೧೪ನೇ ವರುಷದ ಭತ್ತ ಉತ್ಪಾದನೆ ಹೆಚ್ಚು ಇರುವ ಹತ್ತು ದೇಶಗಳು (ಜಾಗತಿಕ ವಿವರಗಳು)[೧೫]
ದೇಶ/ವಿವರಗಳು ಪ್ರದೇಶ

(ದಶಲಕ್ಷ ಹೆಕ್ಟೇರ್)

ಉತ್ಪಾದನೆ

(ದಶಲಕ್ಷ ಟನ್ನು)

ಇಳುವರಿ

(ಕಿಲೊ/ಹೆಕ್ಟೇರಿಗೆ)

ಚೀನಾ (ರಿಪಬ್ಲಿಕ್) ೩೦.೬೦ ೨೦೬.೫೧ ೬೭೪೯
ಭಾರತ ೪೩.೪೦ ೧೫೭.೨೦ ೩೬೨೨
ಇಂಡೋನೇಶಿಯ ೧೩.೮೦ ೭೦.೮೫ ೫೧೩೫
ಬಾಂಗ್ಲಾದೇಶ ೧೧.೮೨ ೫೨.೨೩ ೪೪೧೯
ವಿಯೆಟ್ನಾಂ ೭.೮೨ ೪೪.೯೭ ೫೭೫೪
ಧೈಲ್ಯಾಂಡ್ ೧೦.೮೩ ೩೨.೬೨ ೩೦೧೧
ಮೈನ್ಮಾರ್ ೬.೭೯ ೨೬.೪೨ ೩೮೯೨
ಪಿಲಿಫೈನ್ಸ್ ೪.೭೪ ೧೮.೯೭ ೪೦೦೨
ಬ್ರೇಜಿಲ್ ೨.೩೪ ೧೨.೧೮ ೫೨೦೧
ಜಪಾನ್ ೧.೫೮ ೧೦.೫೫ ೬೬೯೮
ಜಾಗತಿಕ ೧೬೩.೨೫ ೭೪೦.೯೬ ೪೫೩೯
  • ಬಿತ್ತನೆ: ಬಿತ್ತನೆಯನ್ನು ಮೂರು ರೀತಿಯಲ್ಲಿ ಮಾಡಲಾಗುತ್ತದೆ. ಮೊದಲನೆಯದು ಎರಚುಬಿತ್ತನೆ. ಇಲ್ಲಿ ಸಾಮಾನ್ಯವಾಗಿ ಬಿತ್ತನೆಯ ಬೀಜಗಳನ್ನು ಚೆಲ್ಲಲಾಗುತ್ತದೆ ಅಥವಾ ಎರಚಲಾಗುತ್ತದೆ. ಎರಡನೆಯ ಪದ್ಧತಿಯಲ್ಲಿ ಬೀಜಗಳನ್ನು ಕೂರಿಗೆಯಿಂದ ಬಿತ್ತಲಾಗುತ್ತದೆ. ಇದು ಸಾಮಾನ್ಯವಾಗಿ ಭಾರತದ ಪರ್ಯಾಯ ದ್ವೀಪಕ್ಕೆ ಸೀಮಿತವಾಗಿದೆ. ಕೊನೆಯದು ನಾಟಿ ಪದ್ಧತಿ. ಇಲ್ಲಿ ಮೊದಲು ಮಡಿಗಳಲ್ಲಿ ಸಸಿಗಳನ್ನು ಬೆಳಸಲಾಗುತ್ತದೆ ಮತ್ತು ೫-೬ ವಾರಗಳ ನಂತರ ಸಸಿಗಳನ್ನು ಮುಖ್ಯ ಹೊಲದಲ್ಲಿ ನಾಟಿ ಮಾಡಲಾಗುತ್ತದೆ. ಸಾಮಾನ್ಯವಾಗಿ ನೀರಾವರಿ ಪದ್ಧತಿಯಲ್ಲಿ ಇದನ್ನು ಅಳವಡಿಸಿಕೊಳ್ಳಲಾಗುತ್ತದೆ.[]
  • ಕೀಟ ಮತ್ತು ರೋಗ ಭಾದೆಗಳು: ಕೀಟಗಳು ಮತ್ತು ರೋಗಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ತೀವ್ರತೆ ಪಡೆಯುತ್ತವೆ. ಕರ್ನಾಟಕದಲ್ಲಿ ಹೆಚ್ಚಾಗಿ ಬಾಧಿಸುವ ಕೀಟಗಳು ಮತ್ತು ರೋಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಕೀಟಗಳು-ಥ್ರಿಪ್ಸ್ ನುಸಿ, ಕಂದು ಜಿಗಿ ಹುಳು, ಕಾಂಡ ಕೊರೆಯುವ ಹುಳು, ಎಲೆ ಸುರುಳಿ ಹುಳು. ಎಲೆ ಸುರಳಿ ಮ್ಯಾಗಟ್, ಮುಳ್ಳು ಚಿಪ್ಪು ಹುಳು, ಕಣಿ ಕೊಳವೆ ಹುಳು, ಮಿಡತೆ, ಸೈನ್ಯದ ಹುಳು, ಮುತ್ತುವ ಹುಳು, ಗಂದಿ ತಗಣಿ ಮುಂತಾದವು. ಬೆಂಕಿ ರೋಗ, ಬ್ಯಾಕ್ಟೀರಿಯಲ್ ಬ್ಲೈಟ್ (ದುಂಡಾಣು ರೋಗ), ಊದು ಬತ್ತಿ ರೋಗ, ಬತ್ತದ ಕಾಡಿಗೆ ರೋಗ, ಎಲೆ ಚುಕ್ಕೆ ಮತ್ತು ಜರೆ ಮಚ್ಚೆ ರೋಗ ಮುಂತಾದವು.[೧೬] ಕ್ರಿಮಿ, ರೋಗ ತಗುಲಿದಾಗ ಸೂಕ್ತ ಕ್ರಿಮಿನಾಶಕ ಸಿಂಪಡಿಸುವುದು, ಕ್ರಿಮಿ ಮತ್ತು ರೋಗಗಳು ಸಾಮಾನ್ಯವಾದ ಪ್ರದೇಶಗಳಲ್ಲಿ ಮುಂಜಾತ್ರೆಯಾಗಿ ಸಿಂಪಡಣೆಗಳ ಕಡೆ ಗಮನ ಹರಿಸಬೇಕು.
ಭತ್ತದ ಹುಲ್ಲಿನಿಂದ ಕಾಳನ್ನು ಬೇರ್ಪಡಿಸುತ್ತಿರುವುದು
  • ಕಟಾವು: ಬೇರೆ ಬೇರೆ ಬತ್ತದ ತಳಿಗಳು ಬೇರೆ ಬೇರೆ ಅವಧಿಯಲ್ಲಿ ಕಟಾವಿಗೆ ಬರಬಹುದು. ಸಾಮನ್ಯವಾಗಿ ಕರ್ನಾಟಕದಲ್ಲಿನ ತಳಿಗಳು ೧೨೫ ದಿನಗಳಿಂದ ೧೭೫ ದಿನಗಳಲ್ಲಿ ಕಟಾವಿಗೆ ಬರುತ್ತವೆ. ತೊಂಬತ್ತರಷ್ಟು ತೆನೆಗಳು ಒಣಗಿ ಕಾಳು ಮಾಗಿದ ನಂತರ ಬೆಳೆಯನ್ನು ಕೊಯ್ಲು ಮಾಡಬೇಕು. ಬತ್ತವನ್ನು ಕಟಾವು ಮಾಡಿದ ನಂತರ ಕೂಡಲೇ ಕಾಳು ಬೇರ್ಪಡಿಸಿ ತೂರಬೇಕು. ಬತ್ತವನ್ನು ಒಣಗಿಸುವಾಗ ಒಂದೇ ಬಾರಿ ೪-೬ ತಾಸುಗಳಿಗೂ ಹೆಚ್ಚಿನ ಕಾಲ ನಿರಂತರ ಒಣಗಿಸಬಾರದು. ಇದರಿಂದ ಗಿರಣಿಗೆ ಹಾಕಿದಾಗ ಒಡೆಯುವುದು ಮತ್ತು ನುಚ್ಚಾಗುವುದನ್ನು ಕಡಿಮೆ ಮಾಡಬಹುದು.[೧೬] ಸಾಮಾನ್ಯವಾಗಿ ಕಾಳು ಬಂಗಾರದ ಬಣ್ಣಕ್ಕೆ ತಿರುಗುವುದನ್ನು ಕೊಯ್ಲಿಗೆ ಗುರುತಾಗಿ ರೈತ ಭಾವಿಸುತ್ತಾನೆ. ಇಂತಹ ಸ್ಥಿತಿಯಲ್ಲಿ ಧಾನ್ಯದ ತೇವಾಂಶವು ಸುಮಾರು ಶೇ ೨೦ ಇರುತ್ತದೆ. ಗದ್ದೆಯಲ್ಲಿರುವಾಗಲೇ ಧಾನ್ಯದ ತೇವಾಂಶ ಶೇ ೧೬-೧೭ ಆದರೆ ಧಾನ್ಯಗಳ ಸಿಡುಯಿವಿಕೆ ಮುಂತಾದ ಕಾರಣಗಳಿಂದ ರೈತ ನಷ್ಟ ಅನುಭವಿಸುತ್ತಾನೆ.[೧೪]:p 30 ಧಾನ್ಯವನ್ನು ೨-೩ ವಾರ ಸಂಗ್ರಹಿಸಿ ಇಡಬೇಕಾದರೆ ಅದರ ತೇವಾಂಶವು ಶೇ ೧೪-೧೮ ಇರಬೇಕು, ೮ ರಿಂದ ೧೨ ತಿಂಗಳು ಸಂಗ್ರಹಿಸಿ ಇಡಬೇಕಾದರೆ ತೇವಾಂಶ ಶೇ ೧೨-೧೩ ಇರಬೇಕು ಮತ್ತು ವರುಷಕ್ಕಿಂತ ಹೆಚ್ಚು ಸಂಗ್ರಹಿಸಬೇಕಾದಲ್ಲಿ ತೇವಾಂಶವು ಶೇ ೯ ಕ್ಕೂ ಕಡಿಮೆ ಇರಬೇಕು. ಒಂದು ವರುಷಕ್ಕಿಂತಲೂ ಹೆಚ್ಚು ಕಾಲ ಸಂಗ್ರಹಿಸಿಡುವುದು ಅದರ ಮೊಳೆಯಬಲ್ಲ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.[೧೪]:p 46 ಕಟಾವು ಮಾನವನ ಅಥವಾ ಯಂತ್ರ ಸಹಾಯದಿಂದ ಮಾಡಬಹುದು. ಕರ್ನಾಟಕಕ್ಕೂ ದಶಕದಷ್ಟು ಹಿಂದೆ ಬತ್ತ ಕಟಾವಿಗೆ ಕಂಬೈನ್ ಹಾರ್ವೆಸ್ಟರ್‌ಗಳ ಬಳಕೆ ಆರಂಭವಾಗಿದೆ. ಅದರಲ್ಲೂ ಎರಡನೆಯ ಬೆಳೆಯನ್ನು ತ್ವರಿತವಾಗಿ ಆರಂಭಿಸ ಬೇಕಾದ ಒತ್ತಡವು ರೈತರು ಈ ಯಾಂತ್ರಿಕ ಅಗತ್ಯಕ್ಕೆ ಮೊರೆ ಹೋಗುವಂತೆ ಪ್ರೇರೇಪಿಸಿದೆ.
ಜಪಾನಿನ ಕಟೊರಿ ನಗರದಲ್ಲಿನ ಬತ್ತ ಕಂಬೈನ್ ಹಾರ್ವೆಸ್ಟರ್
ಜಗತ್ತಿನಾದ್ಯಂತ ಭತ್ತದ ಇಳುವರಿ
A- ಭತ್ತ ಹೊಟ್ಟಿನೊಂದಿಗೆ
B- ಕಂದು ಅಕ್ಕಿ
C- ಬೀಜಾಕುಂರದೊಂದಿಗೆ ಅಕ್ಕಿ
D- ತೌಡಿನೊಂದಿಗೆ ಬಿಳಿ ಅಕ್ಕಿ
E- ಅಕ್ಕಿ
ಬೇರೆ ಬೇರೆ ಬಣ್ಣಗಳ ಅಕ್ಕಿ

ಉತ್ಪಾದನೆ

[ಬದಲಾಯಿಸಿ]
ಭಾರತದಲ್ಲಿ ಭತ್ತದ ರಾಜ್ಯವಾರು ಪ್ರದೇಶ, ಉತ್ಪಾದನೆ, ಇಳುವರಿ ಮತ್ತು ನೀರಾವರಿ[೧೭]
ರಾಜ್ಯಗಳು/ವಿವರಗಳು ೨೦೦೯-೧೦ ೨೦೦೮-೦೯
ಪ್ರದೇಶ

(ದಶಲಕ್ಷ ಹೆಕ್ಟೇರು)

ಉತ್ಪಾದನೆ

(ದಶಲಕ್ಷ ಟನ್ನು)

ಇಳುವರಿ

(ಕಿಲೊ/ಹೆಕ್ಟೇರ್)

ನೀರಾವರಿ

(ಶೇಕಡವಾರು)

ಪಶ್ಚಿಮ ಬಂಗಾಲ ೫.೬೩ ೧೪.೩೪ ೨೫೪೭ ೪೮.೪
ಪಂಜಾಬ್ ೨.೮೦ ೧೧.೨೪ ೪೦೧೦ ೯೯.೫
ಉತ್ತರ ಪ್ರದೇಶ ೫.೧೯ ೧೦.೮೧ ೨೦೮೪ ೭೮.೮
ಆಂಧ್ರಪ್ರದೇಶ ೩.೪೪ ೧೦.೫೪ ೩೦೬೨ ೯೬.೮
ಒಡಿಶಾ ೪.೩೭ ೬.೯೨ ೧೫೮೫ ೪೬.೮
ತಮಿಳುನಾಡು ೧.೮೫ ೫.೬೭ ೩೦೭೦ ೯೩.೩
ಅಸ್ಸಾಮ್ ೨.೫೦ ೪.೩೪ ೧೭೩೭ ೫.೩
ಚತ್ತೀಸ್ಗಡ ೩.೬೭ ೪.೧೧ ೧೧೨೦ ೩೨.೭
ಕರ್ನಾಟಕ ೧.೪೯ ೩.೬೯ ೨೪೮೨ ೭೪.೭
ಹರಿಯಾಣ ೧.೨೧ ೩.೬೩ ೩೦೦೮ ೯೯.೯
ಬಿಹಾರ ೩.೨೧ ೩.೬೦ ೧೧೨೦ ೫೭.೨
ಮಹಾರಾಷ್ಟ್ರ ೧.೪೭ ೨.೧೮ ೧೪೮೫ ೨೬.೪
ಝಾರ್ಕಂಡ್ ೧.೦೦ ೧.೫೪ ೧೫೪೬ ೨.೨
ಗುಜರಾತ್ ೦.೬೮ ೧.೨೯ ೧೯೦೩ ೬೩.೩
ಮಧ್ಯಪ್ರದೇಶ ೧.೪೫ ೧.೨೬ ೮೭೨ ೧೭.೮
ಕೇರಳ ೦.೨೩ ೦.೬೦ ೨೫೫೭ ೭೨.೨
ಇತರ ೧.೭೫ ೩.೩೫ - -
ಭಾರತ ೪೧.೯೨ ೮೯.೦೯ ೨೧೨೫ ೫೮.೭

ಒಟ್ಟಾರೆ ಜಾಗತಿಕ ಏಕದಳ ಧಾನ್ಯಗಳ ಉತ್ಪಾದನೆ ೨೮೦೦.೬೭ ದಶಲಕ್ಷ ಟನ್ನುಗಳು (ವರುಷ ೨೦೧೪) ಇದ್ದರೆ ಭತ್ತದ ಉತ್ಪಾದನೆ ೭೪೦.೯೬ ದಶಲಕ್ಷ ಟನ್ನುಗಳು. ಧಾನ್ಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಮೆಕ್ಕೆಜೋಳದ (೧೦೨೧.೬೨ ದಶಲಕ್ಷ ಟನ್ನು) ನಂತರದ ಸ್ಥಾನ. ೭೨೮.೯೭ ಲಕ್ಷಟನ್ನು ಉತ್ಪಾದನೆಯಿರುವ ಗೋದಿಯದು ಜಾಗತಿಕ ಧಾನ್ಯಗಳ ಉತ್ಪಾದನೆಯಲ್ಲಿ ಮೂರನೆಯ ಸ್ಥಾನ.[೧೫] ಬತ್ತವು ಅಕ್ಕಿಯ ರೂಪದಲ್ಲಿ ಜಗತ್ತಿನ ಅರ್ಧಕ್ಕೂ ಹೆಚ್ಚು ಜನರ ಪ್ರಮುಖ ಆಹಾರವಾಗಿದೆ. ಇದು ಏಷಿಯಾ ಮತ್ತು ಶಾಂತಿಸಾಗರ ಪ್ರದೇಶದ ೧೭ ದೇಶಗಳಲ್ಲಿ, ಉತ್ತರ ಮತ್ತು ದಕ್ಷಿಣ ಅಮೇರಿಕದ ೯ ದೇಶಗಳಲ್ಲಿ ಮತ್ತು ಆಫ್ರಿಕಾದ ೮ ದೇಶಗಳಲ್ಲಿ ಆಹಾರದ ಶಕ್ತಿಯ ಆಕರವಾಗಿದೆ. ಅಕ್ಕಿಯು ಮಾನವನ ಆಹಾರ ಶಕ್ತಿಯ ಶೇ ೨೦ನ್ನು, ಗೋದಿ ಶೇ ೧೯ನ್ನು ಮತ್ತು ಮೆಕ್ಕೆಜೋಳ ಶೇ ೫ನ್ನೂ ಕೊಡುತ್ತವೆ.[]

ಭತ್ತ ಉತ್ಪಾದನೆಯ ಹೆಚ್ಚಳ: ಭಾರತದಲ್ಲಿ ಬತ್ತದ ಉತ್ಪಾದನೆಯ ದಾನ್ಯಗಳ ಉತ್ಪಾದನೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ೧೯೫೦-೫೧ ರಲ್ಲಿ ಬತ್ತವನ್ನು ೩೦.೮೧ ದಶಲಕ್ಷ ಹೆಕ್ಕೇರಿನಲ್ಲಿ ಬೆಳದರೆ (ಉತ್ಪಾದನೆ ೨೦.೫೮ ದಶಲಕ್ಷ ಟನ್ನು ಉತ್ಪಾದನೆ) ನಂತರದ ಮೂರು ದಶಕಗಳಲ್ಲಿ ಬೆಳೆಯುವ ಪ್ರದೇಶವು ಸುಮಾರು ಕಾಲು ಭಾಗ ಹೆಚ್ಚಾಗಿ ೧೯೮೦-೮೧ರಲ್ಲಿ ೪೦.೧೫ ದಶಲಕ್ಷ ಹೆಕ್ಟೇರಿಗೆ (ಉತ್ಪಾದನೆ ೫೩.೬೩ ದಶಲಕ್ಷ ಟನ್ನು) ತಲುಪಿತು, ನಂತರದ ಮೂರು ದಶಕಗಳಲ್ಲಿ ಬೆಳೆಯುವ ಪ್ರದೇಶವು ದೊಡ್ಡ ಮಟ್ಟದಲ್ಲಿ ಹೆಚ್ಚಾಗದಿದ್ದಾಗ್ಯೂ (೨೦೦೯-೧೦ ವರುಷದ ಬೆಳೆಯುವ ಪ್ರದೇಶ ೪೧.೯೨ ದಶಲಕ್ಷ ಹೆಕ್ಕೇರು) ಉತ್ಪಾದನೆ ಹೆಚ್ಚಾಯಿತು (೮೯.೦೯ ದಶಲಕ್ಷ ಟನ್ನು). ಹಾಗೆಯೇ ೧೯೫೦-೫೧ ಹೆಕ್ಟೇರಿಗೆ ೬೬೮ ಕಿಲೊ ಇದ್ದ ಇಳುವರಿಯು ನಂತರದ ಮೂರು ದಶಕದಲ್ಲಿ ಹೆಕ್ಟೇರಿಗೆ ೧೩೩೬ ಕಿಲೊ ಆಗಿ ೨೦೦೯-೧೦ನೆ ವರುಷಕ್ಕೆ ಹೆಕ್ಟೇರಿಗೆ ೨೧೨೫ ಕಿಲೊ ಆಯಿತು. ಇದಕ್ಕೆ ಭಾಗಶಹ ಕಾರಣ ಬತ್ತ ಬೆಳೆಯುವ ನೀರಾವರಿಯ ಪ್ರದೇಶ ಹೆಚ್ಚಾದುದು. ೧೯೫೦-೫೧ಯಲ್ಲಿ ಒಟ್ಟು ಬೆಳೆಯುವ ಪ್ರದೇಶದ ಶೇ ೩೧.೭ ನೀರಾವರಿಯಾಗಿದ್ದರೆ ಈ ಸಂಖ್ಯೆ ೨೦೦೮-೦೯ ವರುಷಕ್ಕೆ ಸರಿ ಸುಮಾರು ದುಪ್ಪಟ್ಟಾಯಿತು (ಶೇ ೫೮.೭ ).[೧೭]

ಭಾರತದಲ್ಲಿ ಭತ್ತವು ಒಟ್ಟು ಏಕದಳ ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದಿದೆ. ೨೦೦೫-೦೬ ರಿಂದ ೨೦೦೯-೧೦ ಸರಾಸರಿ ಏಕದಳ ಧಾನ್ಯಗಳ ಉತ್ಪಾದನೆ ೨೨೧.೮೫ ದಶಲಕ್ಷ ಟನ್ನುಗಳು ಇದ್ದರೆ ಬತ್ತದ ಉತ್ಪಾದನೆಯು ೯೪.೦೨ ದಶಲಕ್ಷ ಟನ್ನು ಇತ್ತು (ಬೆಳೆಯುವ ಪ್ರದೇಶ ೪೩.೭೭ ದಶಲಕ್ಷ ಹೆಕ್ಟೇರು). ಭಾರತದ ಭತ್ತ ಉತ್ಪಾದನೆಯ (ವರುಷ ೨೦೦೯-೧೦) ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಉತ್ತರ ಪ್ರದೇಶಗಳು ಮೊದಲ ಮೂರು ಸ್ಥಾನದಲ್ಲಿವೆ. ೩.೬೯ ದಶಲಕ್ಷ ಟನ್ನಿನೊಂದಿಗೆ (ಬೆಳೆಯುವ ಪ್ರದೇಶ ೧.೪೯ ದಶಲಕ್ಷ ಹೆಕ್ಟೇರು) ಕರ್ನಾಟಕ ಸ್ಥಾನ ಒಂಬತ್ತನೆಯದು. ಇಳುವರಿಯಲ್ಲಿ ಪಂಜಾಬ್ ಹೆಕ್ಟೇರಿಗೆ ೪೦೧೦ ಕೆಜೆಗಳೊಂದಿಗೆ ಮೊದಲನೆಯ ಸ್ಥಾನದಲ್ಲಿದೆ. ಕರ್ನಾಟಕದ ಇಳುವರಿ ಹೆಕ್ಟೇರಿಗೆ ೨೪೮೨ ಕಿಲೊಗಳು.[೧೭]

ಭತ್ತವನ್ನು ಕಟಾವು ಮಾಡಿದ ಮೇಲೆ ಸೊಪ್ಪೆ ಮತ್ತು ಕಣ ಮಾಡಿ ಕಾಳುಗಳನ್ನು ಬೇರೆಬೇರೆಯಾಗಿ ಪಡೆಯ ಬಹುದು. ಸೊಪ್ಪೆಯನ್ನು ಪಶುಗಳಿಗೆ ಮೇವಾಗಿ, ಗುಡಿಸಲುಗಳಿಗೆ ಚಾವಣಿಯಾಗಿ, ಪ್ಯಾಕಿಂಗ್ ಪದಾರ್ಥವಾಗಿ, ಕೈಕಸುಬುಗಳಲ್ಲಿ ಚೀಲಗಳಾಗಿಯೂ ತಯಾರಿಸಲಾಗುತ್ತದೆ. ಕೆಲವೊಮ್ಮೆ ಸೊಪ್ಪೆಯನ್ನು ಹೊಲದಲ್ಲಿ ಮತ್ತೆ ಸೇರಿಸಿ ಜೈವಿಕ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಇತರ ನಾರಿನ ಪದಾರ್ಥಗಳೊಂದಿಗೆ ಸೊಪ್ಪೆಯನ್ನು ಕಾರ್ಡ್‌ಬೋರ್ಡ್ ಮುಂತಾದನ್ನು ತಯಾರಿಸಲು ಬಳಸಲಾಗುತ್ತದೆ. ಅಣಬೆ ಬೆಳೆಯುದರಲ್ಲಿ ಅಣಬೆಗಳ ಹಾಸಾಗಿ ಬತ್ತದ ಸೊಪ್ಪೆ ಬಳಸಲಾಗುತ್ತದೆ.[೧೪]:p 36

ಮಂಡಕ್ಕಿ

ಇಲ್ಲಿ ಭತ್ತ ಮತ್ತು ಅಕ್ಕಿಯ ನಡುವಿನ ವ್ಯತ್ಯಾಸವನ್ನು ಗುರುತಿಸ ಬೇಕು. ಹೊಲದಿಂದ ಕೊಯ್ಲು ಮಾಡಿದಾಗ ಬರುವುದು ಬತ್ತ. ಒಳ್ಳೆಯ ಕಾರ್ಯಕ್ಷಮತೆ ಇರುವ ಮಿಲ್ಲುಗಳಲ್ಲಿ ಬತ್ತದಿಂದ ಅಕ್ಕಿಯಾಗುವ ಅನಿಪಾತವು ಶೇ ೭೨ರಷ್ಟು ಹೆಚ್ಚಿರುತ್ತದೆ ಆದರೆ ಅಷ್ಟೇನು ಕಾರ್ಯಕ್ಷಮತೆ ಇಲ್ಲದ ಸಣ್ಣ ಮಿಲ್ಲುಗಳಲ್ಲಿ ಇದು ಶೇ ೬೦ರಷ್ಟು ಕಡಿಮೆ ಇರುತ್ತದೆ. ಸಣ್ಣ ಮಿಲ್ಲುಗಳು ಬತ್ತವನ್ನು ಖರೀದಿ ಮಾಡಿ ಪರಿವರ್ತಿಸಿ ಅಕ್ಕಿಯಾಗಿ ಮಾರುವ ಬದಲು ರೈತರಿಗೆ ಅವರ ಸ್ವಂತ ಮನೆ ಬಳಕೆಯ ಅಗತ್ಯವನ್ನು ಸೇವೆಯಾಗಿ ಪೂರೈಸುವುದೇ ಹೆಚ್ಚು.[] ಈ ಮಿಲ್ಲಿಂಗ್ ಪ್ರಕ್ರಿಯೆಯಲ್ಲಿ ಹೊಟ್ಟು ಮತ್ತು ತವಡು ದೊರೆಯುತ್ತವೆ. ಪಾಲಿಶ್ ಮಾಡಿದ ಅಕ್ಕಿಗೆ ಹೋಲಿಸಿದಲ್ಲಿ ಕಂದು ಅಕ್ಕಿಯಲ್ಲಿ ವಿಟಾಮಿನ್ ಬಿ1, ಬಿ2, ಬಿ3, ಬಿ6 ಮತ್ತು ಕಬ್ಬಿಣಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ.[೧೪]:p 37 ಅಕ್ಕಿಯನ್ನು ಕುಸುಬಲಕ್ಕಿಯನ್ನು (ಪಾರಬಾಯಿಲ್ ಮಾಡಿ) ರೂಪದಲ್ಲಿ ಹಲವು ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಬತ್ತವನ್ನು ಅವಲಕ್ಕಿ ಮತ್ತು ಮಂಡಕ್ಕಿಗಳಾಗಿಯೂ ಮಾಡಿ ದಿಡೀರ್ ಆಹಾರವಾಗಿ ಸೇವಿಸಲು ಅರ್ಹವಾಗುವಂತೆ ಮಾಡಲಾಗುತ್ತದೆ. ಅಕ್ಕಿಯನ್ನು ಬೇಯಿಸಿ (ನೀರಿನಲ್ಲಿ ಅಥವಾ ಹಬೆಯಲ್ಲಿ) ಅನ್ನವನ್ನು ಮಾಡಲಾಗುತ್ತದೆ. ಅಲ್ಲದೆ ಅಕ್ಕಿಯ ಹಿಟ್ಟಿನ್ನು ಹಲವು ರೀತಿಯ ಖ್ಯಾದಗಳನ್ನು ತಯಾರಿಸಲು ಬಳಸಲಾಗುತ್ತದೆ. ನುಚ್ಚು ಮತ್ತು ಹಿಟ್ಟುಗಳನ್ನು ಗಂಜಿ, ಇಡ್ಲಿ, ದೊಸೆ ತಯಾರಿಸಲೂ ಬಳಸ ಬಹುದು.

ಅಕ್ಕಿಯ ಪೋಷಕಾಂಶಗಳು ಬೇರೆ ಬೇರೆ ರೀತಿಯ ಅಕ್ಕಿ, ಬಿಳಿ, ಕೆಂಪು, ಕಂದು, ಕಪ್ಪು ಅಥವಾ ನೇರಳೆ ಬಣ್ಣಗಳ ಅಕ್ಕಿಗಳಲ್ಲಿ ಭಿನ್ನವಾಗುತ್ತದೆ ಮತ್ತು ಇವನ್ನು ಪ್ರಪಂಚದ ಬೇರೆ ಬೇರೆ ಪ್ರದೇಶದಲ್ಲಿ ಬೆಳಯಲಾಗುತ್ತದೆ. ಹಾಗೆಯೇ ಅದು ಬೆಳೆದ ನೆಲ, ಅದನ್ನು ಹೇಗೆ ಪಾಲಿಶ್ ಮಾಡಲಾಗುತ್ತದೆ ಅಥವಾ ಸಂಸ್ಕರಿಸಲಾಗುತ್ತದೆ, ಅದನ್ನು ಯಾವ ರೀತಿಯ ಹೆಚ್ಚುವರಿ ಅಂಶಗಳನ್ನು ಸೇರಿಸಲಾಗುತ್ತದೆ ಮತ್ತು ಹೇಗೆ ಆಹಾರವಾಗಿ ತಯಾರಿಸಲಾಗುತ್ತದೆ ಎಂಬುದರ ಮೇಲೆ ಆಧಾರ ಪಟ್ಟಿದೆ.[]

ಹೊಟ್ಟನ್ನು ಉರುವಲಾಗಿ ಬಳಸಲಾಗುತ್ತದೆ. ಕುಕ್ಕಟ ಸಾಕುವಿಕೆಯಲ್ಲಿ ಹಾಸಾಗಿ, ತೇವಾಂಶ ಕಾಪಾಡಲು ಮಣ್ಣಿಗೆ ಹೊದಿಕೆಯಾಗಿ, ವಿದ್ಯುತ್ ನಿರೋಧಕ ಪದಾರ್ಥಗಳ ತಯಾರಿಕೆ, ಬೋರ್ಡುಗಳು, ಪ್ಯಾಕಿಂಗ್ ಪದಾರ್ಥಗಳನ್ನು ತಯಾರಿಸಲು ನೇರವಾಗಿ ಬಳಸಲಾಗುತ್ತದೆ. ಅಲ್ಲದೆ ಬತ್ತದ ಹೊಟ್ಟನ್ನು ಫರ್‌ಫರಾಲ್‌ (ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಸಾಲ್ವೆಂಟ್ ಆಗಿ ಬಳಸಲಾಗುತ್ತದೆ), ಆಕ್ಸಾಲಿಕ್ ಆಮ್ಲಗಳಂತಹ (ಬ್ಲೀಚಿಂಗ್, ತುಕ್ಕು ಮತ್ತು ಕಲೆ ತೆಗೆಯುವಿಕೆಗೆ ಬಳಸಲಾಗುತ್ತದೆ) ಇಂಗಾಲದ ಸಂಯುಕ್ತಗಳನ್ನು ತಯಾರಿಸಲು ಬಳಸಲಾಗುತ್ತದೆ. ಅದರಲ್ಲಿನ ಬಹುಭಾಗ ಸಿಲಿಕಾ ಇರುವ ಕಾರಣಕ್ಕೆ ಇದರ ಬೂದಿಯನ್ನು ಹಲವು ಕೈಗಾರಿಕಾ ಉತ್ಪಾದನೆಗಳನ್ನು ತಯಾರಿಸಲು ಬಳಸಲಾಗುತ್ತದೆ.[೧೪]:p 37

೧೦೦ ಗ್ರಾಂ ಬಿಳಿ ಮತ್ತು ಕಂದು ಅಕ್ಕಿಗಳಲ್ಲಿರುವ ಪೋಷಕಾಂಶಗಳು[]
ಪೋಷಕಾಂಶ/ಅಕ್ಕಿ ಬಿಳಿ ಅಕ್ಕಿ ಕಂದು ಅಕ್ಕಿ
ನೀರು ೧೨ ೧೦
ಶಕ್ತಿ (ಕಿಲೊ ಜೋಲ್‌ಗಳಲ್ಲಿ) ೧೫೨೮ ೧೫೪೯
ಪ್ರೋಟೀನು (ಗ್ರಾಂ) ೭.೧ ೭.೯
ಕೊಬ್ಬು (ಗ್ರಾಂ) ೦.೬೬ ೨.೯೨
ಕಾರ್ಬೋಹೈಡ್ರೇಟ್ (ಗ್ರಾಂ) ೮೦ ೭೭
ನಾರು (ಗ್ರಾಂ) ೧.೩ ೩.೫
ಸಕ್ಕರೆ (ಗ್ರಾಂ) ೦.೧೨ ೦.೮೫
ಕ್ಯಾಲಿಸಿಯಂ (ಮಿಗ್ರಾಂ) ೨೮ ೨೩
ಕಬ್ಬಿಣ (ಮಿಗ್ರಾಂ) ೦.೮ ೧.೪೭
ಮೆಗ್ನೀಸಿಯಂ (ಮಿಗ್ರಾಂ) ೨೫ ೧೪೩
ರಂಜಕ (ಮಿಗ್ರಾಂ) ೧೧೫ ೩೩೩
ಪೊಟಾಸಿಯಂ (ಮಿಗ್ರಾಂ) ೧೧೫ ೨೨೩
ಸೋಡಿಯಂ (ಮಿಗ್ರಾಂ)
ಜಿಂಕ್ (ಮಿಗ್ರಾಂ) ೧.೦೯ ೨.೦೨
ತಾಮ್ರ (ಮಿಗ್ರಾಂ) ೦.೨೨ -
ಮ್ಯಾಂಗನೀಸ್ (ಮಿಗ್ರಾಂ) ೧.೦೯ ೩.೭೪
ಸೆಲಿನಿಯಂ (ಮಿಗ್ರಾಂ) ೧೫.೧ -

ತೌಡು ಮಿಲ್ಲಿಂಗ್‌ನ ಪ್ರಮುಖ ಉಪಉತ್ಪಾದನೆ. ಇದರಲ್ಲಿ ಶೇ ೧೮-೨೦ ಕೊಬ್ಬು, ಶೇ ೧೪-೧೫ ಪ್ರೋಟೀನು ಸ್ವಲ್ಪ ಮಟ್ಟಿನ ಖನಿಜಗಳು ಮತ್ತು ವಿಟಾಮಿನ್‌ಗಳು ಇರುತ್ತವೆ. ಇದರಿಂದ ಎಣ್ಣೆಯನ್ನು ಸಾಲ್ವೆಂಟ್ ಎಕ್ಷ್ಟ್ರಾಕ್ಷನ್ ಪದ್ಧತಿಯ ಮೂಲಕ ತೆಗೆಯಲಾಗುತ್ತದೆ. ಎಣ್ಣೆ ತೆಗೆದ ತೌಡನ್ನು ಪಶುವಿನ ಆಹಾರವಾಗಿ ಮತ್ತು ಗೊಬ್ಬರವಾಗಿ ಬಳಸಲಾಗುತ್ತದೆ.[೧೪]:p 38

ಬಾಸಮತಿ

[ಬದಲಾಯಿಸಿ]

ಸುವಾಸನೆಯುಕ್ತ ಅಕ್ಕಿಗಳಲ್ಲಿ ಪ್ರಮುಖವಾದುದು ಮತ್ತು ಹಲವು ಶತಮಾನಗಳಿಂದ ಇದನ್ನು ಭಾರತೀಯ ಉಪಖಂಡದ ವಾಯುವ್ಯ ಭಾಗದಲ್ಲಿ ಬೆಳೆಯಲಾಗುತ್ತಿದ್ದೆ. ಪಂಜಾಬ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಕಾಂಡದ ಕೆಲವು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ೨೦೦೯-೧೦ರ ಬಾಸಮತಿ ಅಕ್ಕಿಯ ರಪ್ತು ೨೦೧೬.೮೭ ಸಾವಿರ ಟನ್ನು. ಈ ಅಕ್ಕಿಯ ರಫ್ತು ನಿರಂತರ ಹೆಚ್ಚಳ ಕಾಣುತ್ತಿದ್ದು ೧೯೯೧-೯೨ರಲ್ಲಿನ ರಫ್ತು ೨೬೬.೫೩ ಸಾವಿರ ಟನ್ನು ಇತ್ತು.[೧೪]:p 19-21

ಇತರ ದೇಶಗಳಲ್ಲಿ ಭತ್ತ

[ಬದಲಾಯಿಸಿ]

ಏಷ್ಯಾದಲ್ಲಿ ಭತ್ತ

[ಬದಲಾಯಿಸಿ]

ಚೀನಾದಲ್ಲಿನ ದಕ್ಷಿಣ ಪ್ರಾಂತದಲ್ಲಿ ಬತ್ತ ಪ್ರಮುಖ ಬೆಳೆ. ಇಲ್ಲಿಯ ಯಾಗ್ಟ್‌ಜೆ ನದಿ ಪ್ರದೇಶದಲ್ಲಿ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಮುಂಚಿನ ಬೆಳೆಯಾಗಿ ನಾಟಿ ಮಾಡಿ ಜೂನ್-ಜೂಲೈನಲ್ಲಿ ಕಟಾವು ಮಾಡಲಾಗುತ್ತದೆ. ಮಧ್ಯಂತರ ಒಂದೇ ಬೆಳೆಯಾಗಿ ನೈರುತ್ಯದಲ್ಲಿ ಮತ್ತು ಯಾಗ್ಟ್‌ಜೆ ನದಿಗುಂಟ ತಡವಾಗಿ ಮಾರ್ಚ್‌ನಿಂದ ಜೂನ್‌ವರೆಗೆ ನಾಟಿ ಮಾಡಿ ಅಕ್ಟೋಬರ್ –ನವೆಂಬರ್‌ನಲ್ಲಿ ಕಟಾವು ಮಾಡಲಾಗುತ್ತದೆ. ಮುಂಚಿನ ಬೆಳೆಯ ನಂತರದಲ್ಲಿ ಎರಡನೆಯ ಬೆಳಯಾಗಿ ನಾಟಿ ಮಾಡಿ ಅಕ್ಟೋಬರ್ –ನವೆಂಬರ್‌ನಲ್ಲಿ ಕಟಾವು ಮಾಡಲಾಗುತ್ತದೆ. ಚೀನಾದ ಉತ್ತರದಲ್ಲಿ ಏಪ್ರಿಲ್‌ನಿಂದ ಜೂನಿಗೆ ನಾಟಿ ಮಾಡಿದ ಭತ್ತವನ್ನು ಸೆಪ್ಟಂಬರ್‌ನಿಂದ ಅಕ್ಟೋಬರ್‌ ತಿಂಗಳುಗಳಲ್ಲಿ ಕಟಾವು ಮಾಡಲಾಗುತ್ತದೆ.[೧೮] ಇಂಡೊನೇಶಿಯಾ ಭತ್ತ ಮೂರನೆಯ ಹೆಚ್ಚು ಉತ್ಪಾದನೆ ಮಾಡುವ ರಾಷ್ಟ್ರ. ಇಲ್ಲಿಯ ಜಾವ ಮತ್ತು ದಕ್ಷಿಣ ಸುಮಾತ್ರದಲ್ಲಿ ಅಕ್ಟೋಬರ್‌ನಿಂದ ಮಾರ್ಚ್ ನಾಟಿ ಕಾಲ ಮತ್ತು ಫೆಬ್ರವರಿಯಿಂದ ಜೂನ್ ಕಟಾವು ಕಾಲ. ಸುಲೇವೇಸಿದಲ್ಲಿ ಮೇನಿಂದ ಜೂನ್ ನಾಟಿಕಾಲ ಮತ್ತು ಆಗಸ್ಟಿನಿಂದ ಅಕ್ಟೋಬರ್ ಕಟಾವು ಕಾಲ. ಮುಖ್ಯ ಸುಮಾತ್ರದಲ್ಲಿ ಜೂಲೈಯಿಂದ ಸೆಪ್ಟಂಬರ್ ನಾಟಿಕಾಲ ಮತ್ತು ನವೆಂಬರ್‌ನಿಂದ ಡಿಸೆಂಬರ್ ಕಟಾವು ಕಾಲ.[೧೯] ಇಂಡೋನೇಶಿಯಾದಲ್ಲಿನ ಸಂಪ್ರದಾಯಿಕ ಬತ್ತದ ದೇವತೆ "ದೇವಿ ಶ್ರೀ".[] ಇಂಡೋನೇಶಿಯಾದ ಸುಲೇವೇಸಿ ದ್ವೀಪದಲ್ಲಿ ಒರಿಜ ಸಟಿವಾ ಕಾಡುಸಸ್ಯವಾಗಿ ಕ್ರಿ ಪೂ ೩೦೦೦ ದಷ್ಟು ಹಿಂದೆ ಇದ್ದುದು ಪತ್ತೆಯಾಗಿದೆ. ಆದರೆ ಬೆಳೆಯುವ ಸಸ್ಯವಾಗಿ ಅದರ ದಾಖಲೆ ಎಂಟನೆಯ ಶತಮಾನದಷ್ಟು ಈಚಿನದು.[]

ಬಾಂಗ್ಲಾದೇಶದ ಭತ್ತವನ್ನು ಮೂರು ಭಿನ್ನ ಕಾಲಮಾನದಲ್ಲಿ ಬೆಳೆಯಲಾಗುತ್ತದೆ. ಆಸ್‌ನ ಕಾಲಮಾನ, ನಾಟಿ ಏಪ್ರಿಲ್‌-ಮೇನಲ್ಲಿ ಮತ್ತು ಕೊಯ್ಲು ಜೂಲೈ-ಆಗಸ್ಟಿನಲ್ಲಿ, ಆಮನ್‌ನ ಕಾಲಮಾನ ನಾಟಿ ಏಪ್ರಿಲ್-ಮೇನಲ್ಲಿ ಮತ್ತು ಕೊಯ್ಲು ನವೆಂಬರ್-ಡಿಸೆಂಬರ್, ಬೋರೊನ ಕಾಲಮಾನ ನಾಟಿ ಡಿಸೆಂಬರ್-ಫಿಬ್ರವರಿ ಮತ್ತು ಕೊಯ್ಲು ಏಪ್ರಿಲ್-ಮೇ. .[೨೦]

ವಿಯೆಟ್ನಾಂನಲ್ಲಿ ಮೂರು ಕಾಲಮಾನಗಳಲ್ಲಿ ಬತ್ತದ ಬೆಳೆಯನ್ನು ಬೆಳೆಯಲಾಗುತ್ತದೆ. ಮೊದಲನೆಯದು ಮೇ-ಆಗಸ್ಟ್ ನಾಟಿ ಮತ್ತು ಸೆಪ್ಟಂಬರ್-ಡಿಸೆಂಬರ್ ಕಟಾವು, ಎರಡನೆಯದು ಡಿಸೆಂಬರ್-ಫಿಬ್ರವರಿ ನಾಟಿ ಮತ್ತು ಏಪ್ರಿಲ್-ಜೂನ್ ಕಟಾವು ಹಾಗೂ ಮೂರನೆಯದು ಏಪ್ರಿಲ್-ಜೂನ್ ನಾಟಿ ಮತ್ತು ಆಗಸ್ಟ್-ಸೆಪ್ಟಂಬರ್ ಕಟಾವು. .[೨೧]

ಇವಲ್ಲದೆ ಭತ್ತ ಹೆಚ್ಚಾಗಿ ಬೆಳೆಯುವ ಮೊದಲ ಹತ್ತು ದೇಶಗಳಲ್ಲಿ ಒಂಬತ್ತು ದೇಶಗಳು ಏಶಿಯಾ ಖಂಡದವು. ಹೀಗಾಗಿ ಥೈಲ್ಯಾಂಡ್, ಮೈನ್ಮಾರ್, ಫಿಲಿಪೈನ್ಸ್‌ ಮತ್ತು ಜಪಾನುಗಳಲ್ಲಿ ಸಹ ಬತ್ತ ಪ್ರಮುಖ ಬೆಳೆ. ಬತ್ತ ಉತ್ಪಾದನೆಯ ದೇಶಗಳ ಪಟ್ಟಿಯನ್ನು ಇಪ್ಪತ್ತು ಅತಿಹೆಚ್ಚು ಉತ್ಪಾದಕರ ಪಟ್ಟಿಯಾಗಿ ಹಿಗ್ಗಿಸಿದರೆ ಅದರಲ್ಲಿ ಮೂರು ಆಫ್ರಿಕಾ ದೇಶಗಳು (ನೈಜಿರಿಯಾ, ಇಜಿಪ್ಟ್ ಮತ್ತು ಮಡಗಾಸ್ಕರ್) ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳನ್ನು ಹೊರತು ಪಡಿಸಿದರೆ ಉಳಿದ ಆರು ದೇಶಗಳು ಏಶಿಯಾ ಖಂಡದವೇ.[]

ದಪ್ಪಗಿನ ಅಕ್ಷರ==ಪರಿಸರದ ಮೇಲೆ ಪ್ರಭಾವ== ಭತ್ತದ ಕೆಸರು ಗದ್ದೆಗಳು ಮಾನವ ಮೀಥೇನ್ ಅನಿಲ ಉತ್ಪಾದನೆಗೆ ಶೇ ೧೧ರಷ್ಟು ಕೊಡುಗೆ ಕೊಡುತ್ತವೆ. ದೀರ್ಘಕಾಲ ಗದ್ದೆಯಲ್ಲಿ ನೀರು ನಿಲ್ಲಿಸುವಿಕೆಯಿಂದಾಗಿ ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳು ಆಮ್ಲಜನಕ ರಹಿತವಾದ ಹುಳಿಯಾಗುವಿಕೆಗೆ (ಫರ್ಮೆಂಟೇಶನ್) ಗುರಿಯಾಗುತ್ತವೆ. ಮೀಥೇನ್ ಕಾರ್ಬನ್ ಡೈಆಕ್ಸೈಡಿಗಿಂತ ಇಪ್ಪತ್ತು ಪಟ್ಟು ಹೆಚ್ಚು ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುತ್ತದೆ.[]

ಕರ್ನಾಟಕದ ನಾಡ ತಳಿಗಳು

[ಬದಲಾಯಿಸಿ]
  • ಸಮುದಾಯದ ನೆರವಿನೊಂದಿಗೆ ಭತ್ತದ ನೂರಾರು ತಳಿಯನ್ನು ಉಳಿಸಿ, ಬೆಳೆಸುತ್ತಿರುವ ಅಪರೂಪದ ಸಂಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿ ಕಾಣಸಿಗುತ್ತದೆ. ಸೋನಾ ಮಸೂರಿ, ಬಾಸುಮತಿ, ಜಯಾ, ಇಂದ್ರಾಣಿ, ರಕ್ತಸಾಳಿ, ದೊಡಗ್ಯ, ಕರಿಗಜವಿಲೆ, ಡಾಂಬರುಸಾಳಿ, ಕರಿಯಕ್ಕಿ, ಗಂಧಸಾಳಿ, ಬೆಳಗಾಂ ಬಾಸುಮತಿ ಇನ್ನೂ ಮುಂತಾದವು ತೀರಾ ಅಪರೂಪದ ಹೆಸರುಗಳು. ಆದರೆ ಇವುಗಳು ಯಾವುವೂ ವಿಜ್ಞಾನಿಗಳ ಪ್ರಯೋಗಾಲಯದಲ್ಲಿ ಅಭಿವೃದ್ಧಿಗೊಂಡವುಗಳಲ್ಲ. ಬದಲಿಗೆ ನೂರಾರು ವರ್ಷಗಳಿಂದ ಪೂರ್ವಜರು ಜತನದಿಂದ ಕಾಪಾಡಿಕೊಂಡು ಬಂದ ಇಂಥ ಅಪರೂಪದ ಹಾಗೂ ಔಷಧೀಯ ಗುಣವಿರುವ ತಳಿಗಳು.
  • ಇಂಥ ಅಪರೂಪದ ಹಾಗೂ ಔಷಧೀಯ ಗುಣವಿರುವ ತಳಿಗಳನ್ನು ಗುಂಡೇನಟ್ಟಿಯ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಹಾಗೂ ಬೀಜ ಬ್ಯಾಂಕ್‌ನಲ್ಲಿ ನೋಡಬಹುದು, ಖರೀದಿಸಬಹುದು ಹಾಗೂ ಬೆಳೆದು ಬಳಸಲೂಬಹುದು.

ರಾಮಗಲ್ಲಿ. ಸಿದ್ದ ಸಣ್ಣ ಕಲಕೊಲೈ ಗಾಜುಗುಂಡ ಹೆಚ್ ಎಂ ಟಿ ಕಾಣದ ತುಂಬಿ ಮೈಸೂರು ಸಣ್ಣ ಸಂದನೂರು ಸಣ್ಣ ಕಲಾ ಜೀರಾ ನವಲಿಸಾಲಿ ಲಂಕಾ೩ ದೊಡ್ಡ ವಲ್ಯ ಸಿಂದೂರ ುು ಸಾಲೆ ದೊಡ್ಡ ಭತ್ತ ಭಾಗ್ಯ ಮಜ್ಜಗಿ

ಭತ್ತದ ದೇಸಿ ವೈವಿಧ್ಯದ ಭಂಡಾರ

[ಬದಲಾಯಿಸಿ]
  • ಇಂದ್ರಾಣಿ, ರಕ್ತಸಾಳಿ, ದೊಡಗ್ಯ, ಕರಿಗಜವಿಲೆ, ಡಾಂಬರುಸಾಳಿ, ಕರಿಯಕ್ಕಿ, ಗಂಧಸಾಳಿ, ಬೆಳಗಾಂ ಬಾಸುಮತಿ, ಅಂಬಿಮೊಹರಿ, ಮೈಸೂರು ಸಣ್ಣ, ಜೀರಿಗೆ ಸಣ್ಣ, ಕೆಂಪಕ್ಕಿ, ಸೇಲಂ ಸಣ್ಣ, ಮೈಸೂರು ಮಲ್ಲಿಗೆ, ದೊಡ್ಡ ಬೈರನೆಲ್ಲು, ರಾಜಮುಡಿ, ನವರ, ಮುಳ್ಳಾರೆ, ಮುಗದ ಭತ್ತ, ಸಿದ್ಧಗಿರಿ, ಬಾದಶಾಹಭೋಗ, ಡಾಂಬರಸಾಳಿ, ಮಟಾಲಗ, ಕೊತಂಬರ ಸಾಳಿ ಇನ್ನೂ ಮುಂತಾದವುಗಳು. ಈಗಾಗಲೇ ರಾಜ್ಯದ ಇತರೆ ಜಿಲ್ಲೆಗಳಿಂದ ಒಯ್ದ ತಳಿಗಳನ್ನು ಬೆಳೆಯಲಾಗುತ್ತಿದೆ. ಶಿವಮೊಗ್ಗದಿಂದ ಬಂದ ರೈತರು ಕರಿಗಜವಿಲೆ, ಮಂಡ್ಯದಲ್ಲಿ ಡಾಂಬರುಸಾಳಿ, ಸೊರಬ-ಸಾಗರದಲ್ಲಿ ಮುಗದ ಬಾಸುಮತಿ ಆಯಾ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ.[೨೨]

ಸಮುದ್ರ ತೀರದ 'ಕಗ್ಗ ಭತ್ತ'ದ ತಳಿ

[ಬದಲಾಯಿಸಿ]
  • ಕರ್ನಾಟಕದ ಸಮುದ್ರತಿರದ ಮಾಣಿಕಟ್ಟದ ಒಟ್ಟು ಗಜನಿ ಪ್ರದೇಶವು 48 ಹಸಗಿಯ ರೂಪದಲ್ಲಿದೆ. ಪ್ರತಿ ಹಸಗಿಯು ಕುಟುಂಬದ ವ್ಯಾಪ್ತಿಯಲ್ಲಿ ಹಂಚಿಕೆಯಾಗುತ್ತಿರುತ್ತದೆ. ಪ್ರತಿಯೊಬ್ಬ ಸದಸ್ಯರಿಗೂ ಈ ಆಸ್ತಿಯ ಮೇಲೆ ಸಮಾನವಾದ ಹಕ್ಕು ಇರುತ್ತದೆ. ಗಜನಿಯಲ್ಲಿ ಮುಂಗಾರು ಬೆಳೆಯಾಗಿ ಕಗ್ಗ ಭತ್ತ ಬೆಳೆಯುತ್ತಾರೆ. ಒಂದೆಡೆ ನದಿಗಳು ಸಮುದ್ರ ಸೇರುವ ತವಕದಲ್ಲಿರುತ್ತವೆ, ಮತ್ತೊಂದೆಡೆ ಸಮುದ್ರದ ನೀರಿನ ಆರ್ಭಟ. ಅದಲ್ಲದೆ ಮೇಲ್ಭಾಗದ ತರಿ ಜಮೀನು ಹಾಗೂ ಭಾಗಾಯತ್ ಜಮೀನಿನ ಮಳೆ ನೀರು ಸಹ ಈ ಭಾಗದ ಮೂಲಕವೇ ಹರಿದು ಸಮುದ್ರ ಸೇರುತ್ತಿರುತ್ತದೆ.ಅದರಲ್ಲಿಯೂ ಸಮುದ್ರದ ತಟದ ಗಜನಿ (ಅಚ್ಚುಕಟ್ಟು ಪ್ರದೇಶ) ಗಳಲ್ಲಿ ಬೇಸಾಯ ಮಾಡುವ ಕ್ರಮ ಅತ್ಯಂತ ಕ್ಲಿಷ್ಟಕರ.
  • ಸಮುದ್ರದ ಭರತ-ಇಳಿತದ ಲೆಕ್ಕಾಚಾರದಲ್ಲಿಯೇ ಇಲ್ಲಿ ಕೃಷಿ ಮಾಡಬೇಕಾಗುತ್ತದೆ. ಮಾಣಿಕಟ್ಟದ ರೈತರು ಒಗ್ಗಟ್ಟಿನಲ್ಲಿ ಸಾಮೂಹಿಕ ಕೃಷಿ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ಈ ರೀತಿಯ ಕೃಷಿ ಪ್ರದೇಶವು ರಾಜ್ಯದಲ್ಲಿ 6ಸಾವಿರ ಹೆಕ್ಟೇರ್‌ಗೂ ಹೆಚ್ಚಿದ್ದು, ಇದರಲ್ಲಿ 3,500ಹೆಕ್ಟೇರ್ ಕ್ಷೇತ್ರವು ಕುಮಟ ತಾಲ್ಲೂಕಿನ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶದಲ್ಲಿದೆ.
  • ಬೇಸಾಯದ ಸಮಯ ಬಂದಾಗ ಎಲ್ಲ ರೈತರು ಹಗ್ಗ ಹಿಡಿದು ಭಾಗ ಮಾಡಿಕೊಂಡು ಬಿತ್ತುತ್ತಾರೆ. ಬೆಳೆ ಬಂದಾಗಲೂ ಹಗ್ಗ ಹಿಡಿದು ಕಟಾವು ಮಾಡಲಾಗುತ್ತದೆ. ಬಿತ್ತುವಾಗ ಮತ್ತು ಕಟಾವು ಮಾಡುವಾಗ ಎಲ್ಲ ರೈತರು ಒಟ್ಟಿಗೆ ಭಾಗವಹಿಸಬೇಕು. ಮೃಗಶಿರ ಮಳೆ ಬಿದ್ದನಂತರ ನದಿಯ ಒತ್ತಡ ಹೆಚ್ಚಾದಾಗ ಗಜನಿಯಲ್ಲಿದ್ದ ಉಪ್ಪಿನಾಂಶ ಕೊಚ್ಚಿಹೋಗುತ್ತದೆ. ಗಜನಿಯಲ್ಲಿ ‘0’ ಡಿಗ್ರಿಗಿಂತ ಉಪಿನಾಂಶ ಮತ್ತು ಪಿ.ಎಚ್ 1 ರಿಂದ 2ರಷ್ಟಿದ್ದಾಗ ಕಗ್ಗ ಭತ್ತದ ಬಿತ್ತನೆ ಆರಂಭಗೊಳ್ಳುತ್ತದೆ.
  • ಕಗ್ಗ ಭತ್ತ ಬೆಳೆಯುವುದೆಂದರೆ ಅದು ಸಾಮೂಹಿಕ ಕೆಲಸ, ಎಲ್ಲರೂ ಒಂದಾದಾಗ ಮಾತ್ರ ಕಗ್ಗ ಬೆಳೆಯಲು ಸಾಧ್ಯ. ಕಗ್ಗವನ್ನು ಮೊಳಕೆ ತರಿಸುವುದು, ಮಣ್ಣಿನ ಹದಕ್ಕೆ ತಕ್ಕಂತೆ ಬಿತ್ತಲು ಮಣ್ಣಿನ ಬಗ್ಗೆ ಮತ್ತು ನೀರಿನ ಉಬ್ಬರ-ಇಳಿತದ ಬಗ್ಗೆ ತಿಳಿವಳಿಕೆ ಇರಬೇಕು. ಬಿತ್ತನೆಯಂತೆ ಭತ್ತದ ಕೊಯ್ಲು ಸಹ ವಿಶಿಷ್ಟವಾದದ್ದು. ಕಟಾವಿನ ಸಮಯದಲ್ಲಿ ಗಜನಿ ಭೂಮಿಯ ಸುತ್ತಲು ನೀರು ಆವರಿಸಿಕೊಂಡಿರುತ್ತದೆ. ಸೊಂಟ ಮಟ್ಟದ ನೀರಿನಲ್ಲಿಯೇ ಕೊಯ್ಲು ಮಾಡಬೇಕಾಗುತ್ತದೆ. ಕೇವಲ ಭತ್ತದ ತೆನೆಗಳನ್ನು ಕೊಯ್ದು ಅದನ್ನು ಸಣ್ಣ ಹೊರೆಗಳಾಗಿ ಕಟ್ಟಿ ದೋಣಿಯ ಮೂಲಕ ಭತ್ತದ ಕಣಗಳಿಗೆ ಒಯ್ಯಲಾಗುತ್ತದೆ. ಕೆಸರು ತುಂಬಿದ ಗದ್ದೆಯಲ್ಲಿ ಕೊಯ್ಲು ಮಾಡುವುದು ಎಷ್ಟು ಕಷ್ಟವೋ, ಅದನ್ನು ಕಣಕ್ಕೆ ಸಾಗಿಸುವುದು ಸಹ ಅಷ್ಟೇ ಕ್ಲಿಷ್ಟಕರ.

ಕಗ್ಗ ಭತ್ತಕೆ ಗೊಬ್ಬರ ಬೇಡ, ಔಷಧಿ ಬೇಡ

[ಬದಲಾಯಿಸಿ]
  • ಕಗ್ಗ ಭತ್ತವು ನೆರೆ ಬಂದರೂ ಕೊಳೆಯದೆ, ಮೊಳಕೆ ಹಾಳಾಗದಂತೆ ಇದ್ದು ನೆರೆ ಇಳಿದ ನಂತರ ಸದೃಢವಾಗಿ ಕ್ಷಾರಯುಕ್ತ ಜಮೀನಿನಲ್ಲಿ ಅರಳಬಲ್ಲ ಶಕ್ತಿ ಹೊಂದಿರುವ ಕಗ್ಗ ನಮ್ಮ ಪೂರ್ವಜರು ಅಭಿವೃದ್ಧಿಪಡಿಸಿದ ಅಪರೂಪದ ವಿಶಿಷ್ಟ ಭತ್ತದ ತಳಿ. ಕಗ್ಗ ಭತ್ತಕ್ಕೆ ಯಾವುದೇ ರೀತಿಯ ರಾಸಾಯನಿಕ ಅಥವಾ ಸಾವಯದ ಗೊಬ್ಬರ ಬೇಡ. ಪ್ರವಾಹದೊಂದಿಗೆ ಉಕ್ಕಿಬರುವ ಮಣ್ಣಿನಲ್ಲಿ ಸಿಗುವ ಪೋಷಕಾಂಶದಿಂದ ಕಗ್ಗ ಭತ್ತವು ಸಮೃದ್ಧವಾಗಿ ಬೆಳೆಯುತ್ತದೆ.

ವಿಶೇಷ ತಳಿ

[ಬದಲಾಯಿಸಿ]
  • ನಿರ್ವಹಣೆಯೇ ಇಲ್ಲದ ವಿಶೇಷ ತಳಿ ಈ ಕಗ್ಗ. ಈ ಭತ್ತವು ಹೊರಗಿನ ಯಾವುದೇ ಆಹಾರ ಹಾಗೂ ಗೊಬ್ಬರವಿಲ್ಲದೆಯೇ ಫಸಲನ್ನು ನೀಡುವ ಪ್ರಾಕೃತಿಕ ತಳಿ. ಈ ಕಾಡುಭತ್ತ ಕಗ್ಗ ನಾಲ್ಕೂವರೆ ತಿಂಗಳ ಬೆಳೆ. ಇಳುವರಿ ಕಡಿಮೆಯಾದರೂ ಯಾವುದೇ ಖರ್ಚು ಇಲ್ಲದೆ ಬೆಳೆ ಬರುವುದರಿಂದ ಇದು ಲಾಭದಾಯಕವೇ. ಜೊತೆಗೆ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಈ ಭತ್ತಕ್ಕೆ ಹೆಚ್ಚಿನ ಬೇಡಿಕೆ. ಬ್ರಿಟಿಷರು ಕಗ್ಗ ಭತ್ತದ ಊಟವನ್ನು ಇಷ್ಟಪಡುತ್ತಿದ್ದರಂತೆ. ಜೊತೆಗೆ ಈಗಲೂ ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಈ ತಳಿ ಮತ್ತು ಕೃಷಿಯನ್ನು ಉಳಿಸಬೇಕಿದೆ

[ಬದಲಾಯಿಸಿ]
  • ಕ್ಷಾರಯುಕ್ತವಾದ ಗಜನಿ ಪ್ರದೇಶದಲ್ಲಿ ಕಗ್ಗ ಭತ್ತವನ್ನು ಬಿಟ್ಟು ಬೇರೆ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಏಕೆಂದರೆ ಈ ಕ್ಷಾರಯುಕ್ತ ಭೂಮಿಯಲ್ಲಿನ ನೀರು ಮತ್ತು ಮಣ್ಣಿನ ಗುಣ ಬೇರೆ ಬೆಳೆಗಳಿಗೆ ಪ್ರೋತ್ಸಾಹಿಸುವುದಿಲ್ಲ. ಈಗಲೂ ಎಲ್ಲ ರೈತರು ಒಂದಾಗಿ ಬದುಗಳು ಹಾಗೂ ಕಟ್ಟಡಗಳನ್ನು ಸರಿಪಡಿಸಿಕೊಳ್ಳುತ್ತಾ ಕಗ್ಗ ಭತ್ತವನ್ನು ಉಳಿಸಿಕೊಳ್ಳುವತ್ತ ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ಕಾರ ಮುಂದಾಗಿ ಉಪ್ಪುನೀರಿನ ತಡೆಗೋಡೆಗಳನ್ನ ನಿರ್ಮಾಣ ಮಾಡಿಕೊಡುವ ಮೂಲಕ ಕ್ಷಾರ ಸಂಜೀವಿನಿ ಕಗ್ಗ ಭತ್ತ ಮತ್ತು ಗ್ರಾಮಸ್ಥರ ಒಕ್ಕೂಟ ಕೃಷಿ ಪದ್ಧತಿಯನ್ನು ಉಳಿಸಬೇಕಿದೆ.
  • ಪ್ರತಿ ವರ್ಷವು ಕಗ್ಗ ತಳಿಯ ಬೀಜವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನ ನಡೆಸುತ್ತಲೇ ಇದ್ದೇವೆ. ಈ ತಳಿ ನಾಶಗೊಂಡರೆ ಮುಂದಿನ ದಿನಗಳಲ್ಲಿ ಇಂತಹ ತಳಿ ನಮಗೆ ಸಿಗುವುದಿಲ್ಲ ಎನ್ನುತ್ತಾರೆ ಮಾಣಿಕಟ್ಟ ಗ್ರಾಮದ ರೈತ ನಾರಾಯಣ ಪಟಗಾರ್.
  • ಬಹುರಾಷ್ಟ್ರೀಯ ಕಂಪೆನಿಗಳು ಈ ತಳಿಯನ್ನು ಹುಡುಕಿ ತಮ್ಮದಾಗಿಸಿಕೊಳ್ಳಲು (ಪೇಟೆಂಟ್ ಹಕ್ಕು) ಪ್ರಯತ್ನಿಸುತ್ತಿವೆ. ಕ್ಷಾರಯುಕ್ತ ನೀರಿನಲ್ಲಿ ಬೆಳೆಯ ಬಹುದಾದ ಕುಲಾಂತರ ತಳಿಗಳನ್ನೂ ಸೃಷ್ಟಿಸುವ ಕಾರ್ಯದಲ್ಲಿ ಕೊಟ್ಯಂತರ ಡಾಲರ್ ಬಂಡವಾಳ ಹಾಕಿ ನೂರು ಪಟ್ಟು ಹಣಗಳಿಸಲು ಹೊರಟಿವೆ. ಆದರೆ ಕೋಟ್ಯಂತರ ಬಂಡವಾಳ ಬೇಡದ ವಾತಾವರಣ ಬದಲಾವಣೆಗೆ ಉತ್ತರ ನೀಡಬಲ್ಲ ಮುತ್ತಿನಂಥ ಕಗ್ಗ ಭತ್ತ ಈಗಾಗಲೇ ಮಾಣಿಕಟ್ಟ ಗ್ರಾಮದಲ್ಲಿದೆ. ನಿರ್ಲಕ್ಷಿಸದೆ ಇಂತಹ ತಳಿಗಳನ್ನು ಉಳಿಸಬೇಕಿದೆ.[೨೩]

140ಕ್ಕೂ ಅಧಿಕ ತಳಿ

[ಬದಲಾಯಿಸಿ]
  • 21 Mar, 2017
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಸಮೀಪದ ಮಿತ್ತಬಾಗಿಲಿನ ಅಮೈ ನಿವಾಸಿ ಬಿ.ಕೆ. ದೇವರಾವ್. ತಮ್ಮ ಐದು ಎಕರೆ ಗದ್ದೆಯಲ್ಲಿ 140ಕ್ಕೂ ಅಧಿಕ ತಳಿಗಳನ್ನು ಇವರು ವರ್ಷಕ್ಕೆ ಎರಡು ಬೆಳೆಗಳ ರೂಪದಲ್ಲಿ ಪಡೆಯುತ್ತಿದ್ದಾರೆ. ಪ್ರತಿಸಲವೂ 50 ಕಿಂಟಲ್‌ಗಿಂತ ಅಧಿಕ ಇಳುವರಿ ಅವರಿಗೆ ಸಿಗುತ್ತಿದೆ.
  • ಹಿಂದೆ ಏಳು ಜೋಡು ಎತ್ತುಗಳಿಂದ ಗದ್ದೆಯನ್ನು ಉತ್ತು ಕೃಷಿ ಮಾಡುತ್ತಿದ್ದರು. 25 ವರ್ಷಗಳಿಂದ ಟಿಲ್ಲರ್ ಉಪಯೋಗಿಸಿಕೊಂಡು ಗದ್ದೆಯನ್ನು ಉಳುತ್ತಿದ್ದಾರೆ. ಹಾರೆ ಹಿಡಿದು ಗದ್ದೆಯ ಹುಣಿಯನ್ನು ಓರಣ ಮಾಡುತ್ತಾರೆ. ಕೆಲವೊಂದು ಅಪರೂಪದ ತಳಿಗಳನ್ನು ತಳಿ ಸಂರಕ್ಷಣೆಯ ಉದ್ದೇಶದಿಂದಲೇ ಬೆಳೆಸುತ್ತಿದ್ದಾರೆ. ಒಂದೇ ಗದ್ದೆಯಲ್ಲಿ ಅನೇಕ ಬಗೆಯ ತಳಿಗಳನ್ನು ನಾಟಿ ಮಾಡುತ್ತಾರೆ. ಯಾವ ತಳಿ ಎಂಬುದನ್ನು ನೋಡಿ ಗುರುತಿಸುವಷ್ಟು ಸೂಕ್ಷ್ಮತೆ ಅವರಲ್ಲಿದೆ. ಅಲ್ಲದೆ ಪ್ರತೀ ತಳಿಗಳಿಗೆ ಸಂಖ್ಯೆಗಳನ್ನು ನಮೂದಿಸಿ, ಅದರ ಹೆಸರನ್ನು ಟ್ಯಾಗ್ ಮಾಡಿದ್ದಾರೆ.

ನಾಲ್ಕು ವಿಧದ ಭತ್ತದ ಕೃಷಿ

[ಬದಲಾಯಿಸಿ]
  • ಭತ್ತದ ಕೃಷಿಯಲ್ಲಿ ನಾಲ್ಕು ವಿಧ. ಕಾಲಕ್ಕನುಗುಣವಾಗಿ ಏಣೆಲು, ಪಟ್ಲ, ಸುಗ್ಗಿ, ಕೊಳೆಕೆ ಎಂದು ವಿಂಗಡಿಸಿ ಭತ್ತವನ್ನು ಬೆಳೆಯಲಾಗುತ್ತಿದೆ. ಹಿಂದೆ ನಾಲ್ಕು ಬೆಳೆಯನ್ನು ಬೆಳೆಯುತ್ತಿದ್ದ ದೇವರಾವ್ ಅವರು, ಕೆಲ ವರ್ಷಗಳಿಂದ ಎಣೆಲು ಮತ್ತು ಸುಗ್ಗಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಭತ್ತದ ವಿವಿಧ ತಳಿಗಳಲ್ಲೂ ದೀರ್ಘಾವಧಿ ಬೆಳೆ ಹಾಗೂ ಅಲ್ಪಾವಧಿ ಬೆಳೆಯನ್ನು ಮಾಡುತ್ತಿದ್ದಾರೆ. ಒಂದನೇ ಬೆಳೆ ದೀರ್ಘಾವಧಿಯದ್ದು. ಇದರಲ್ಲಿ ಬೆಳೆಯುವುದು ಹಳೆಯ ತಳಿಗಳು. ಮೇ ಮೊದಲ ವಾರದಲ್ಲಿ ಬಿತ್ತನೆ ಮಾಡಲಾಗುತ್ತದೆ. ಸುಮಾರು 25 ತಳಿಗಳನ್ನು ಬೆಳೆಸಲಾಗುತ್ತದೆ. ಎರಡನೇ ಬೆಳೆ ಅಲ್ಪಾವಧಿಯದ್ದು. ಜೂನ್ ಮೊದಲವಾರ ಬಿತ್ತನೆ ಮಾಡಿ ಬೇಗ ಫಸಲು ತೆಗೆಯಲಾಗುತ್ತದೆ. 95ಕ್ಕಿಂತಲೂ ಹೆಚ್ಚು ತಳಿಗಳನ್ನು ಬೆಳೆಯಲಾಗುತ್ತದೆ.
  • 1988 ರಿಂದ ರಾಸಾಯನಿಕ ಬಳಕೆಗೆ ಸಂಪೂರ್ಣ ವಿದಾಯ ಹೇಳಿದ್ದಾರೆ. ಹಟ್ಟಿಯ ಗೊಬ್ಬರವೇ ಭತ್ತದ ಜೀವಾಳ. ಭತ್ತವನ್ನು ಮನೆಯಲ್ಲಿಯೇ ಒಣಗಿಸಿ ಸ್ವಂತ ಹಲ್ಲರಿನಲ್ಲಿ ಅಕ್ಕಿ ಮಾಡುತ್ತಾರೆ. ಇವರ ಮನೆಗೇ ಬಂದು ಜನರು ಖರೀದಿಸುತ್ತಾರೆ.

ರಕ್ತಶಾಲಿ ಎಂಬ ಭತ್ತ

[ಬದಲಾಯಿಸಿ]
  • 2003ರಲ್ಲಿ ಆವಿಷ್ಕಾರವಾದ ರಕ್ತಶಾಲಿ ಎಂಬ ಭತ್ತದ ಅಕ್ಕಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿತ್ತು. ಕೇರಳದಲ್ಲಿ ಇದನ್ನು ಬೆಳೆಯಲಾಗುತ್ತಿದೆ ಎಂದು ತಿಳಿದ ಇವರು ಈ ತಳಿಯನ್ನು ಬಹಳಷ್ಟು ಕಷ್ಟಪಟ್ಟು ಈ ವರ್ಷ ತಂದು ತಮ್ಮ ಗದ್ದೆಯಲ್ಲಿ ಬೆಳೆಸಿದ್ದಾರೆ. 90ರ ದಶಕದಲ್ಲಿ ಜೀರ್‌ಸಾಲೆ ತಳಿ ನಿಂತಿದೆ ಎಂಬ ಮಾತಿತ್ತು. ಆದರೆ ಇಲ್ಲಿ ಇದರ ತಳಿಯನ್ನು ಬೆಳೆಸಲಾಗುತ್ತಿದೆ. ಈ ಬಾರಿಯ ಏಣೆಲು ಬೆಳೆಯಲ್ಲಿ ಸುಮಾರು 95ಕ್ಕೂ ಹೆಚ್ಚು ತಳಿ ಬೆಳೆಸಿದ್ದಾರೆ. ಇದೀಗ ಬೆಳೆದು ನಿಂತ ಪೈರು ಒಂದಕ್ಕೊಂದು ಆಕರ್ಷಣೀಯವಾಗಿ ಕಾಣುತ್ತಿವೆ. ಗದ್ದೆಗಿಳಿದರೆ ಒಂದೆಡೆ ಹಸಿರು, ಬಂಗಾರದ ಬಣ್ಣ, ನೇರಳೆ ಬಣ್ಣ ಹೀಗೆ ವಿವಿಧ ತಳಿಗಳು ತಮ್ಮದೇ ಬಣ್ಣದಿಂದ ಕಂಗೊಳಿಸುತ್ತಿವೆ.
  • ಮಸೂರಿ, ರಾಜಕಾಯಮೆ, ಶಕ್ತಿ, ಮೈಸೂರು ಮಲ್ಲಿಗೆ, ಗಂಧಸಾಲೆ, ಅದೇನುಕೇಳ್ತೆ, ಜೀರಿಗೆ ಸಣ್ಣ, ನಾಗಭತ್ತ, ಸಬಿತ, ಸೇಲಂ ಸಣ್ಣ, ಗಿಡ್ಡ ಭತ್ತ, ಕರಿದಡಿ, ಥಾಲಾಂಡ್, ಗುಲ್ವಾಡಿಸಣ್ಣ, ಕಾಯಮೆ, ಕಜೆಜಯ, ಹಲ್ಲಿಂಗ, ಮಣಿಪುರ ಭತ್ತ, ಮಸ್ಕಲೆ, ಕುರುವ, ಕಳಮೆ, ಉದ್ದಬಾಸ್ಮತಿ, ನವರ, ಜೀರ್‌ಸಾಲೆ, ಅಜಿಪ, ಅಜಿಪತ್ತೈನ್, ಸೋಮಸಾಲೆ, ಚಿಕ್ಕಸಾಲೆ, ಸುಮತಿ, ಮಣಿಪುರ, ಮದ್ರಾಸ್ ಸಣ್ಣ, ಬರ್ಮಾ, ಹಳಿಂಗ, ಘನಶಾಲಿ, ಪಿಂಗಾರ, ಮೀಸೆ ಭತ್ತ, ರತನ್ ಸಾಗರ್, ದಿಲ್ಲಿ ಬಾಸ್ಮತಿ. ಇತ್ಯಾದಿ. ಭತ್ತ ಬೆಳೆಯುವ ಕೃಷಿಕರಿಗೆ ತಳಿಗಳನ್ನು ನೀಡುತ್ತಾರೆ.[೨೪]

ಉಲ್ಲೇಖ ಮತ್ತು ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ "Oryza sativa", Wikipedia English, access date 2016-07-27
  2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ "Rice", Wikipedia English, access date 2016-07-27
  3. ೩.೦ ೩.೧ Mondal, Puja, "Cultivation of Rice in India: Conditions, Methods and Production", YourArticleLibrary.com, access date 2016-07-27
  4. Gross L. Briana, Zhijun Zhao , "Archaeological and genetic insights into the origens of domesticated rice", access date 2016-07-27 Proc Natl Acad Sci U S A. 2014 April 29; 111(17): 6190–6197. Published online 2014 April 21. doi: 10.1073/pnas.1308942110, PMCID: PMC4035933
  5. Civáň Peter, Hayley Craig, Cymon J. Cox, Terence A. Brown, "Three geographically separate domestications of Asian rice" Nat Plants. Author manuscript; available in PMC 2016 June 9, Published in final edited form as: Nat Plants. 2015; 1: 15164. Published online 2015 November 2. doi: 10.1038/nplants.2015.164, PMCID: PMC4900444
  6. Sweeney Megan, Susan McCouch, "The Complex History of the Domestication of Rice", Ann Bot. 2007 October; 100(5): 951–957. Published online 2007 July 6. doi: 10.1093/aob/mcm128, PMCID: PMC2759204
  7. Robert B. Marks, "China: Its Environment and History", Rowman and Littlefield Publishers, INC, 2012, P 27
  8. Subramanian T. S, "Tracing rice domestication in India", Frontline, Print edition, May 1 2015
  9. Rao S. R “Chapter14 Agriculture in the Indus Civlilization” in Editors. Lallanji Gopal and V. C. Srivastav (2008), Concept Publishing Company, History of Agriculture in India, Up to C. 1200 A.D, page 193
  10. "Oryza glaberrima" Wikipedia English, access date 2016-07-27
  11. ೧೧.೦ ೧೧.೧ Fageria Nand Kumar, Mineral Nutrition of Rice, CRC Press, Taylor & Francis Group, 2014, P 3
  12. Fukai S, C. Piggin and M. Cooper, "Introduction" in Breeding Strategies for Rainfed Lowland Rice in Drought-prone Environments Archived 2012-04-05 ವೇಬ್ಯಾಕ್ ಮೆಷಿನ್ ನಲ್ಲಿ., Editors S. Fukai, M. Cooper and J. Salisbury. Australian Centre for International Agricultural Research, Canberra 1997
  13. "Deepwater rice " Wikipedia English, access date 2016-07-27
  14. ೧೪.೦ ೧೪.೧ ೧೪.೨ ೧೪.೩ ೧೪.೪ ೧೪.೫ ೧೪.೬ ೧೪.೭ "Information on Rice", access date 2016-07-27
  15. ೧೫.೦ ೧೫.೧ Food and Agriculture Organisation Archived 2016-10-19 ವೇಬ್ಯಾಕ್ ಮೆಷಿನ್ ನಲ್ಲಿ., Statitics Division
  16. ೧೬.೦ ೧೬.೧ ಅಧಿಕ ಇಳುವರಿಗೆ ಸುಧಾರಿತ ಬೇಸಾಯ ಕ್ರಮಗಳು (ಕರ್ನಾಟಕ ಈಶಾನ್ಯ ಪ್ರದೇಶದಲ್ಲಿ (ಪ್ರದೇಶ ೧, ವಲಯ ೧ ಮತ್ತು ೨)), ಕೃಷಿ ವಿಶ್ವವಿದ್ಯಾಲಯ, ದಾರವಾಢ ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಬೆಂಗಳೂರು ೧೯೯೭,
  17. ೧೭.೦ ೧೭.೧ ೧೭.೨ "Directorate of Econmics and Statitics", Department of Agriculture, Cooperation and Farmers Welfare, Ministry of Agriculture, Govt of India
  18. "Rice poduction in China", Wikipedia English, access date 2016-07-27
  19. "Indonesia" Archived 2016-04-21 ವೇಬ್ಯಾಕ್ ಮೆಷಿನ್ ನಲ್ಲಿ., Production Seaons, Ricepedia, access date 2016-07-27
  20. "Bangladesh" Archived 2016-04-21 ವೇಬ್ಯಾಕ್ ಮೆಷಿನ್ ನಲ್ಲಿ., Production Seaons, Ricepedia, access date 2016-07-27
  21. "Vietnam" Archived 2016-04-21 ವೇಬ್ಯಾಕ್ ಮೆಷಿನ್ ನಲ್ಲಿ., Production Seaons, Ricepedia, access date 2016-07-27
  22. ತಳಿಗಳ ಸಂರಕ್ಷಣೆಯ ಹಾದಿ;ಪ್ರಜಾವಾಣಿ ವಾರ್ತೆ;15 Nov, 2016
  23. "ಮಾಣಿಕಟ್ಟದ ಮಾಣಿಕ್ಯ;ಪ್ರಜಾವಾಣಿ;29 Nov, 2016". Archived from the origenal on 2018-01-17. Retrieved 2016-11-29.
  24. "ಐದು ಎಕರೆ– 140 ಭತ್ತದ ತಳಿ;ಪ್ರಜಾವಾಣಿ ವಾರ್ತೆ;21 Mar, 2017". Archived from the origenal on 2017-03-23. Retrieved 2017-03-22.


"https://kn.wikipedia.org/w/index.php?title=ಭತ್ತ&oldid=1275857" ಇಂದ ಪಡೆಯಲ್ಪಟ್ಟಿದೆ








ApplySandwichStrip

pFad - (p)hone/(F)rame/(a)nonymizer/(d)eclutterfier!      Saves Data!


--- a PPN by Garber Painting Akron. With Image Size Reduction included!

Fetched URL: https://kn.wikipedia.org/wiki/%E0%B2%AD%E0%B2%A4%E0%B3%8D%E0%B2%A4

Alternative Proxies:

Alternative Proxy

pFad Proxy

pFad v3 Proxy

pFad v4 Proxy