ಇವಾನ್ ಪೆಟ್ರೋವಿಚ್ ಪಾವ್ಲೋವ್
ಇವಾನ್ ಪೆಟ್ರೋವಿಚ್ ಪಾವ್ಲೋವ್ | |
---|---|
ಜನನ | ಇವಾನ್ ಪೆಟ್ರೋವಿಚ್ ಪಾವ್ಲೋವ್ ೧೮೪೯ ಸೆಪ್ಟೆಂಬರ್ ೧೪ ರಷಿಯಾ |
ರಾಷ್ಟ್ರೀಯತೆ | ರಷಿಯಾ |
ಇವಾನ್ ಪೆಟ್ರೋವಿಚ್ ಪಾವ್ಲೋವ್‌ರವರು ೧೮೪೯ರ ಸೆಪ್ಟೆಂಬರ್ ೧೪ರಂದು ಮಧ್ಯ ರಷಿಯಾದ ರೈಝಾನ್ ಎಂಬ ಸಣ್ಣ ಊರಿನ ಹಳ್ಳಿಯ ಪಾದ್ರಿಯ ಮಗನಾಗಿ ಜನಿಸಿದರು. ಪಾವ್ಲೋವ್‌ರವರು ಪ್ರತಿವರ್ತನೆಯ ಬಗ್ಗೆ ಪ್ರಯೋಗಗಳನ್ನು ನಾಯಿಗಳ ಮೇಲೆ ನಡೆಸಿದರು. ನಾಯಿಗಳಿಗೆ ಆಹಾರವನ್ನು ಕೊಟ್ಟಾಗ ಮಾತ್ರ ಜೊಲ್ಲು (ಸಲೈವಾ) ಉತ್ಪತ್ತಿಯಾಗುವುದಿಲ್ಲ, ಅವು ಆಹಾರವನ್ನು ನೋಡುತ್ತಿರುವಾಗಲೂ ಜೊಲ್ಲು ಉತ್ಪತ್ತಿಯಾಗುತ್ತಿರುತ್ತದೆ ಎಂಬ ವಿಷಯವನ್ನು ಅವರು ಕಂಡುಹಿಡಿದರು. ಒಂದು ಸ್ವಾರಸ್ಯವಾದ ಪ್ರಯೋಗವನ್ನು ಅವರು ಮಾಡಿದರು. ವೃತ್ತಾಕಾರವಾದ ಬೆಳಕು ಮೂಡಿಸಿ, ನಂತರ ನಾಯಿಗೆ ಆಹಾರ ನೀಡುವ ಪರಿಪಾಠ ಆರಂಭವಾಯಿತು. ಆದರೆ ಅಂಡಾಕಾರವಾದ ಬೆಳಕು ಬೀರಿದಾಗ ಅದರ ಜೊತೆಗೆ ಆಹಾರ ನೀಡುತ್ತಿರಲಿಲ್ಲ. ಹೀಗೆಯೇ ನಾಯಿಗೆ ಅಭ್ಯಾಸ ಮಾಡಲಾಯಿತು. ಹಾಗಾಗಿ ವೃತ್ತಾಕಾರದ ಬೆಳಕು ಬಿದ್ದೊಡನೆ ಆ ನಾಯಿ ಪ್ರತಿವರ್ತನೆ ತೋರುತ್ತಿತ್ತು. ಕ್ರಮೇಣ ಅಂಡಾಕಾರದ ಬೆಳಕು ವೃತ್ತಾಕಾರವಾಗುವಂತೆ ನಿಯೋಜಿಸಲಾಯಿತು. ಆಗ ಆಹಾರ ಯಾವಾಗ ಬರುತ್ತದೆ ಎಂಬುದನ್ನು ಕಂಡುಹಿಡಿಯಲು ನಾಯಿಗೆ ಕಷ್ಟವಾಯಿತು. ಹಾಗಾಗಿ ಆ ನಾಯಿಯ ಮಾನಸಿಕ ಪರಿಸ್ಥಿತಿ ಬದಲಾಗಿ ವೃತ್ತಾಕಾರವಾಗಿ ಸುತ್ತುತ್ತಾ ಬೊಗಳಲು ಆರಂಭಿಸಿತು! ನಾಯಿ ಬೊಗಳಿದಾಗ, ಮಿಂಚು, ಗುಡುಗು, ಸಿಡಿಲು ತಮ್ಮ ಆರ್ಭಟ ತೋರಿದಾಗ, ಕಡಲಿನ ಮೊರೆತ ಕೇಳಿದಾಗ ಯಾವುದೇ ಬಾಲಕ ಭಯಪಟ್ಟುಕೊಳ್ಳುವುದು ಸಹಜ. ಆದರೆ ಆ ಸಂದರ್ಭದಲ್ಲಿ ಅಲ್ಲಿಯೇ ಇರುವ ತಂದೆತಾಯಿಯರು ಭಯ ಪಟ್ಟುಕೊಳ್ಳದಿದ್ದರೆ, ಅವನಿಗೂ ಭಯದ ಭಾವನೆ ಬರುವುದಿಲ್ಲ ಎಂಬುದಾಗಿ ಪಾವ್ಲೋವ್ ಕಂಡುಹಿಡಿದರು. ನಮ್ಮ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಿಗೆ ಪರಸ್ಪರ ಸಂಬಂಧವಿದೆ ಎಂಬುದನ್ನು ಪಾವ್ಲೋವ್ ನಿರೂಪಿಸಿದರು. ನಮ್ಮ ನರವ್ಯೂಹದ ಪ್ರತಿವರ್ತನೆಗಳ ಬಗ್ಗೆ ಪಾವ್ಲೋವ್‌ರವರು ಅನೇಕ ಮಹತ್ವಪೂರ್ಣ ಸಂಶೋಧನೆಗಳಿಗೆ ಕಾರಣರಾಗಿದ್ದಾರೆ. ಶರೀರವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ಸಾಧನೆಗೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ೧೯೦೪ರಲ್ಲಿ ಪಾವ್ಲೋವ್‌ರವರಿಗೆ ನೀಡಲಾಯಿತು.[೧] ಪಾವ್ಲೋವ್‌ರವರು ೧೯೩೬ರ ಫೆಬ್ರವರಿ ೨೭ರಂದು ನಿಧನರಾದರು.