ವಿಷಯಕ್ಕೆ ಹೋಗು

ಕ್ಯಾಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರಗಳನ್ನು ದಾಖಲಿಸುವ, ಶೇಖರಿಸುವ ಮತ್ತು ಇನ್ನೊಂದು ಕಡೆಗೆ ವರ್ಗಾಯಿಸಲು ಸಹಾಯ ಮಾಡುವ ಒಂದು ಆಪ್ಟಿಕಲ್ ಸಾಧನ ಬಿಂಬಗ್ರಾಹಿ ಅರ್ಥಾತ್ ಕ್ಯಾಮರ. ಈ ಚಿತ್ರಗಳು ಛಾಯಾಚಿತ್ರಗಳು (ಸ್ಥಿರಚಿತ್ರಗಳು), ಚಲಿಸುವ ಚಿತ್ರಗಳು ಅಥವಾ ವಿಡಿಯೋಗಳಾಗಿರಬಹುದು. ಕ್ಯಾಮರ ಪದ ಡಾರ್ಕ್ ಚೇಂಬರ್ ಎಂಬ ಲ್ಯಾಟಿನ್ ಪದದಿಂದ ವ್ಯುತ್ಪತ್ತಿಯಾಗಿದೆ. ಕ್ಯಾಮರದ ಕಾರ್ಯನಿರ್ವಹಣೆ ಬಹುಮಟ್ಟಿಗೆ ಮಾನವನ ಕಣ್ಣಿನ ಕೆಲಸವನ್ನು ಹೋಲುತ್ತದೆ.

ಕ್ರಿಯಾತ್ಮಕ ವಿವರಣೆ

[ಬದಲಾಯಿಸಿ]
ಕ್ಯಾಮರದ ಅಂಗಗಳು

ಕ್ಯಾಮರವು ಗೋಚರ ರೋಹಿತದ ಅಥವಾ ವಿದ್ಯುತ್ಕಾಂತೀಯ ರೋಹಿತದ (spectrum) ಇತರೆ ವಿಭಾಗಗಳಲ್ಲಿ ಕೆಲಸ ಮಾಡಬಹುದು. ಸ್ಥಿರ ಕ್ಯಾಮರವು ಒಂದು ವಸ್ತು ಅಥವಾ ದೃಶ್ಯದ ಪ್ರತಿಬಿಂಬವನ್ನು ವಿದ್ಯುತ್ಕಾಂತೀಯ ಸಂವೇದಕ ಅಥವಾ ಛಾಯಾಗ್ರಾಹಕ ಫಿಲ್ಮಿನ ಮೇಲೆ ಮೂಡಿಸುತ್ತದೆ. ಎಲ್ಲಾ ಕ್ಯಾಮರಗಳ ಮೂಲಭೂತ ವಿನ್ಯಾಸ ಒಂದೇ ಆಗಿರುತ್ತದೆ. ಬೆಳಕು ಮಸೂರದ ಮೂಲಕ ಕ್ಯಾಮರವನ್ನು ಪ್ರವೇಶಿಸುತ್ತದೆ ಮತ್ತು ಬೆಳಕಿಗೆ ಸಂವೇದಿಸುವ ಫಿಲ್ಮ್ ಅಥವಾ ಪರದೆಯಲ್ಲಿ ಪ್ರತಿಬಿಂಬವನ್ನು ಮೂಡಿಸುತ್ತದೆ. ಬೆಳಕು ಎಷ್ಟು ಸಮಯ ಕ್ಯಾಮರವನ್ನು ಪ್ರವೇಶಿಸಬಹುದು ಎಂಬುದನ್ನು ಷಟ್ಟರ್ (ಕವಾಟ) ನಿಯಂತ್ರಿಸುತ್ತದೆ. ಡಿಜಿಟಲ್ ಕ್ಯಾಮರಗಳಲ್ಲಿ ಮೂಡಿದ ಚಿತ್ರವನ್ನು ವೀಕ್ಷಿಸಲು ಒಂದು ಎಲ್‍ಸಿಡಿ ಪರದೆ ಇರುತ್ತದೆ. ಈ ಪರದೆಯು ಚಿತ್ರದ ಜೊತೆ ಚಿತ್ರೀಕರಣ ಮಾಡಿದಾಗ ಬಳಸಿದ ಹಲವು ಆಯ್ಕೆಗಳನ್ನು, ಉದಾಹರಣೆಗೆ ಷಟ್ಟರ್ ವೇಗ, ಐಎಸ್ಓ, ಮಸೂರದ ಗುಣವೈಶಿಷ್ಟ್ಯಗಳು, ಇತ್ಯಾದಿಗಳನ್ನು ತೋರಿಸುತ್ತದೆ.

ವಿಡಿಯೋ ಕ್ಯಾಮರವು ಬಹುಮಟ್ಟಿಗೆ ಸ್ಥಿರ ಕ್ಯಾಮರದಂತೆಯೇ ಕೆಲಸ ಮಾಡುತ್ತದೆ. ಪ್ರಮುಖ ವ್ಯತ್ಯಾಸವೆಂದರೆ ಇದರಲ್ಲಿ ಹಲವು ಸ್ಥಿರಚಿತ್ರಗಳನ್ನು ಅತಿ ವೇಗವಾಗಿ, ಸಾಮಾನ್ಯವಾಗಿ ಸೆಕೆಂಡಿಗೆ ೨೪ ಚೌಕಟ್ಟುಗಳ ವೇಗದಲ್ಲಿ, ದಾಖಲಿಸುತ್ತದೆ. ಈ ಚಿತ್ರಗಳನ್ನು ಒಂದಾದ ನಂತರ ಒಂದರಂತೆ ಅತಿ ವೇಗವಾಗಿ ಪ್ರದರ್ಶಿಸಿದಾಗ ಚಲನಯೆ ಭ್ರಮೆ ಉಂಟಾಗುತ್ತದೆ.

ಇತಿಹಾಸ

[ಬದಲಾಯಿಸಿ]

ಕ್ಯಾಮರದ ಇತಿಹಾಸ ಸೂಜಿರಂಧ್ರ ಕ್ಯಾಮರದಿಂದ ಪ್ರಾರಂಭವಾಗುತ್ತದೆ[]. ಇದನ್ನು ಕ್ರಿ.ಶ.೫ನೆಯ ಶತಮಾನದಲ್ಲಿ ಚೈನಾ ದೇಶದಲ್ಲಿ ಆವಿಷ್ಕರಿಸಲಾಯಿತು. ಇದರಲ್ಲಿ ಬೆಳಕು ಒಂದು ಕಪ್ಪು ಪೆಟ್ಟಿಗೆಯನ್ನು ಚಿಕ್ಕ ರಂಧ್ರದ ಮೂಲಕ ಪ್ರವೇಶಿಸುತ್ತದೆ. ಈ ಪೆಟ್ಟಿಗೆಯಲ್ಲಿ ರಂಧ್ರದ ಎದುರು ಭಾಗದ ಗೋಡೆಯಲ್ಲಿ ವಸ್ತು ಅಥವಾ ದೃಶ್ಯದ ತಲೆಕೆಳಗಾದ ಪ್ರತಿಬಿಂಬ ಮೂಡಿಬರುತ್ತದೆ[]. ನಾಲ್ಕನೆಯ ಶತಮಾನದಲ್ಲಿದ್ದ ಅರಿಸ್ಟಾಟಲ್ ಕೂಡ ಈ ವಿದ್ಯಮಾನವನ್ನು ವಿವರಿಸಿದ್ದಾನೆ. ಆತನು ಮರದ ಎಲೆಗಳ ನಡುವಿನ ಚಿಕ್ಕ ಸ್ಥಳಾವಕಾಶಗಳ ಮೂಲಕ ಬೆಳಕು ಹಾದುಹೋಗಿ ನೆಲದಲ್ಲಿ ಭಾಗಶಃ ಸೂರ್ಯ ಗ್ರಹಣದ ಚಿತ್ರವನ್ನು ಮೂಡಿಸಿದ್ದನ್ನು ಗಮನಿಸಿ ಅದರ ಬಗ್ಗೆ ಬರೆದಿದ್ದನು[].

ಇಟಾಲಿಯನ್ ವಿಜ್ಞಾನಿ ಗಿಯಾಂಬಟ್ಟಿಸ್ಟ ಡೆಲ್ಲಾ ಪೋರ್ಟ ತನ್ನ ೧೫೫೮ರಲ್ಲಿ ಬರೆದ ಮ್ಯಾಜಿಕ್ ನ್ಯಾಚುರಲಿಸ್ ಎಂಬ ಪುಸ್ತಕದಲ್ಲಿ ಬಿಂಬಗ್ರಾಹಿಯನ್ನು ವಿವರಿಸಿದ್ದಾನೆ. ಒಬ್ಬ ಕಲಾವಿದ ಕಾಗದದ ಮೇಲೆ ಒಂದು ಬಿಂಬಗ್ರಾಹಿ ಮೂಡಿಸಿದ ಪ್ರತಿಬಿಂಬದ ಮೇಲೆ ಚಿತ್ರವನ್ನು ರಚಿಸಬಹುದು ಎಂಬದುನ್ನು ಅದರಲ್ಲಿ ಬರೆಯಲಾಗಿತ್ತು. ೧೬೮೫ ರಲ್ಲಿ ಜೊಹಾನ್ ಜಾನ್ ಎಂಬಾತ ಪ್ರತಿಫಲನಕ್ಕಾಗಿ ಒಂದು ಕನ್ನಡಿ ಬಳಸಿದ, ಕೈಯಲ್ಲಿ ಹಿಡಿಯುಬಹುದಾದ ಸಾಧನವನ್ನು ಮೊದಲ ಬಾರಿಗೆ ಬಳಸಿದನು[]. ಇದುವೇ ಆಧುನಿಕ ಕ್ಯಾಮರದ ಪ್ರವರ್ತಕ ಎನ್ನಬಹುದು.

ಬೆಳ್ಳಿಯ ಕೆಲವು ಲವಣಗಳು ಬಿಸಿಲಿಗೆ ಒಡ್ಡಿದಾಗ ಕಪ್ಪಾಗುವುದನ್ನು ಕೆಲವು ವಿಜ್ಞಾನಿಗಳು ಗಮನಿಸಿದ್ದರು. ಈ ತತ್ವವನ್ನು ಬಳಸಿ ಫೋಟೋಗ್ರಾಫಿಕ್ ಪಿಲ್ಮ್ ಅನ್ನು ಆವಿಷ್ಕರಿಸಲಾಯಿತು. ಪ್ರಥಮ ಬಾರಿಗೆ ಶಾಶ್ವತ ಛಾಯಾಚಿತ್ರಣವನ್ನು ೧೮೨೬ರಲ್ಲಿ ಪ್ಯಾರಿಸ್ಸಿನಲ್ಲಿ ಮಾಡಲಾಯಿತು. ಇದರಲ್ಲಿ ಮರದ ಪೆಟ್ಟಿಗೆ ಕ್ಯಾಮರವನ್ನು ಬಳಸಲಾಗಿತ್ತು. ಈ ಛಾಯಾಚಿತ್ರ ತಯಾರಿಸಲು ಎಂಟು ಗಂಟೆಗಳ ಕಾಲ ಹಿಡಿದಿತ್ತು. ಫ‍್ರಾನ್ಸಿನಲ್ಲಿ ೧೮೩೭ರ ಹೊತ್ತಿಗೆ ಬೆಳ್ಳಿಯ ಐಯೋಡೈಡ್ ಲೇಪಿತ ತಟ್ಟೆಯಲ್ಲಿ ಮೂಡಿದ ಪ್ರತಿಬಿಂಬವನ್ನು ಶಾಶ್ವತವಾಗಿ ಮುದ್ರಿಸುವ ಕ್ರಿಯೆಯಲ್ಲಿ ಯಶಸ್ಸನ್ನು ಪಡೆಯಲಾಯಿತು.

ಆರಂಭದ ಕ್ಯಾಮರಗಳಲ್ಲಿ ತಾಮ್ರದ ತಟ್ಟೆಯ ಮೇಲೆ ಬೆಳ್ಳಿಯ ಲವಣಗಳ ಲೇಪನವಿದ್ದವು. ಈ ತಟ್ಟೆಗಳಲ್ಲಿ ಚಿತ್ರ ಮೂಡಿಬರಲು ಗಂಟೆಗಳ ಕಾಲ ಬೆಳಕಿಗೆ ತೆರೆದಿಡಬೇಕಿತ್ತು. ವರ್ಷಗಳು ಕಳೆದಂತೆ ತಂತ್ರಜ್ಞಾನದಲ್ಲಿ ಸುಧಾರಣೆಯಾಗಿ ಈ ಸಮಯ ಮಿನಿಟುಗಳಿಗೆ ನಂತರ ಸೆಕೆಂಡುಗಳಿಗೆ ನಂತರ ಸೆಕೆಂಡಿನ ಅತಿ ಚಿಕ್ಕ ಅಂಶಕ್ಕೆ ಬಂತು. ಈಗಿನ ಕ್ಯಾಮರಗಳು ೧/೬೪೦೦ ಸೆಕೆಂಡು ಕಾಲಾವಕಾಶದಲ್ಲೂ ಚಿತ್ರ ಮೂಡಿಸಬಲ್ಲವು.

ಹಿಂದಿನ ಕಾಲದಲ್ಲಿ ಚಿತ್ರ ಮೂಡಿಬರಲು ತೆಗೆದುಕೊಳ್ಳುತ್ತಿದ್ದ ಸಮಯ ಎಷ್ಟಿತ್ತೆಂದರೆ ಛಾಯಾಗ್ರಾಹಕರು ಮಸೂರದ ಮುಚ್ಚಳವನ್ನು ತೆರೆದು ಕೈಯಲ್ಲಿ ಹಿಡಿದುಕೊಂಡು ಸಮಯವನ್ನು ಮನಸ್ಸಿನಲ್ಲಿ ಲೆಕ್ಕ ಹಾಕಿಕೊಂಡು ನಂತರ ಮುಚ್ಚಳವನ್ನು ಮುಚ್ಚುತ್ತಿದ್ದರು. ಈ ಸಂದರ್ಭದಲ್ಲಿ ಕ್ಯಾಮರ ಅಲುಗಾಡದಂತೆ ಅದನ್ನು ಸ್ಟ್ಯಾಂಡ್ ಮೇಲೆ ಇಡಬೇಕಿತ್ತು.

ಜಾರ್ಜ್ ಈಸ್ಟ್‍ಮ್ಯಾನ್ ಅವರು ಫಿಲ್ಮ್ ಮೇಲೆ ಚಿತ್ರೀಕರಿಸುವ ವಿಧಾನದಲ್ಲಿ ತುಂಬ ಸಂಶೋಧನೆಗಳನ್ನು ಮಾಡಿ ಪ್ರಗತಿಯನ್ನು ಸಾಧಿಸಿದರು. ೧೮೮೮ರಲ್ಲಿ ಕೊಡ್ಯಾಕ್ ಎಂಬ ಹೆಸರಿನಲ್ಲಿ ಅವರು ಕ್ಯಾಮರ ಮಾರಾಟ ಪ್ರಾರಂಬಿಸಿದರು. ಛಾಯಾಗ್ರಹಣ ಕ್ಷೇತ್ರದಲ್ಲಿ ಕೊಡ್ಯಾಕ್ ಎನ್ನುವುದು ತುಂಬ ಪ್ರಖ್ಯಾತ ಹೆಸರು. ಈ ಕೊಡ್ಯಾಕ್ ಕ್ಯಾಮರ ಬಹಳ ಸರಳವಾಗಿತ್ತು. ನಂತರ ಅವರು ಅದನ್ನು ಸುಧಾರಿಸಿ ಹಲವು ನಮೂನೆಯ ಕ್ಯಾಮರಗಳನ್ನು ಮಾರುಕಟ್ಟೆಗೆ ತಂದರು. ೧೯ನೆಯ ಶತಮಾನದ ಕೊನೆಯ ಹೊತ್ತಿಗೆ ಚಲನಚಿತ್ರವೂ ಆವಿಷ್ಕರಿಸಲ್ಪಟ್ಟಿತ್ತು.

ಕೊಡ್ಯಾಕ್ ಕಂಪೆನಿ ೧೯೭೫ರಲ್ಲಿ ಡಿಜಿಟಲ್ ಕ್ಯಾಮರವನ್ನು ಆವಿಷ್ಕರಿಸಿತು. ಅದರಲ್ಲಿ ಚಿತ್ರವನ್ನು ಕ್ಯಾಸೆಟ್ ಟೇಪಿನಲ್ಲಿ ಸಂಗ್ರಹಿಸಲಾಗುತ್ತಿತ್ತು. ಈ ರೀತಿ ಚಿತ್ರೀಕರಿಸಿದ್ದನ್ನು ಟಿ.ವಿ. ಪರದೆಯಲ್ಲಿ ನೋಡಬೇಕಿತ್ತು. ನಂತರದ ವರ್ಷಗಳಲ್ಲಿ ಕ್ಯಾಸೆಟ್ ಟೇಪ್ ಬದಲಿಗೆ ಮೆಮೊರಿ ಕಾರ್ಡ್‍ಗಳು ಬಂದವು. ೨೦೧೦ರ ಹೊತ್ತಿಗೆ ಕ್ಯಾಮರ ಎಂದರೆ ಡಿಜಿಟಲ್ ಕ್ಯಾಮರ ಎಂಬ ಪರಿಸ್ಥಿತಿ ಬಂತು.

ಇತಿಹಾಸದ ಮತ್ತಷ್ಟು ವಿವರ

[ಬದಲಾಯಿಸಿ]
  • ಛಾಯಾಚಿತ್ರಗಳು ಎಲ್ಲಾ ಕಾಲಕ್ಕೂ ಪ್ರತ್ಯಕ್ಷ ಸಾಕ್ಷಿಗಳಂತೆಯೇ ಉಳಿದು ಇತಿಹಾಸವನ್ನು ನೋಡುಗರ ಕಣ್ಣಮುಂದೆ ಆ ಘಟನೆಗಳನ್ನು ಮರು ಸೃಷ್ಟಿಸುತ್ತವೆ. ಕ್ಯಾಮರಾದ ಇತಿಹಾಸದ ಹೆಚ್ಚಿನ ವಿವರ.[][೧]

ಕ್ಯಾಮರದ ಅಂಗಗಳು

[ಬದಲಾಯಿಸಿ]

ಪ್ರತಿಬಿಂಬದ ಸಂಗ್ರಹ

[ಬದಲಾಯಿಸಿ]

ಹಳೆಯ ಕ್ಯಾಮರಗಳು ಪ್ರತಿಬಿಂಬವನ್ನು ಫೋಟೋಗ್ರಾಫಿಕ್ ಪ್ಲೇಟ್ ಅಥವಾ ಫಿಲ್ಮ ಮೇಲೆ ಸಂಗ್ರಹಿಸುತ್ತಿದ್ದವು. ವಿಡಿಯೋ ಮತ್ತು ಡಿಜಿಟಲ್ ಕ್ಯಾಮರಗಳು ಪ್ರತಿಬಿಂಬವನ್ನು ಇಲೆಕ್ಟ್ರಾನಿಕ್ ವಿಧಾನದಲ್ಲಿ ಸಿ.ಸಿ.ಡಿ. ಅಥವಾ ಸಿ.ಎಂ.ಓ.ಎಸ್. ಸಂವೇದಕದಲ್ಲಿ ಗ್ರಹಿಸಿ ಅದನ್ನು ಮೆಮೊರಿ ಕಾರ್ಡ್‍ನಲ್ಲಿ ಸಂಗ್ರಹಿಸುತ್ತವೆ.

ವಸ್ತು ಅಥವಾ ದೃಶ್ಯದಿಂದ ಹೊರಟ ಬೆಳಕನ್ನು ಮಸೂರವು (ಲೆನ್ಸ್) ಫಿಲ್ಮ್ ಅಥವಾ ಸಂವೇದಕದ ಮೇಲೆ ಕೇಂದ್ರೀಕರಿಸುತ್ತದೆ. ಈ ಮಸೂರದ ವಿನ್ಯಾಸ ಮತ್ತು ಗುಣಮಟ್ಟ ಉತ್ತಮ ಚಿತ್ರ ಮೂಡಿಬರುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕ್ಯಾಮರದ ಮಸೂರಗಳು ಹಲವು ನಾಭಿದೂರಗಳಲ್ಲಿ (focal length) ದೊರೆಯುತ್ತವೆ. ಅವುಗಳಲ್ಲಿ ಕೆಲವು ವೈಡ್ ಆಂಗಲ್, ಸ್ಟ್ಯಾಂಡರ್ಡ್, ಟೆಲೆಲೆನ್ಸ್ ಇತ್ಯಾದಿ. ಬೇರೆ ಬೇರೆ ಮಸೂರಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಲ್ಪಡುತ್ತವೆ. ಉದಾಹರಣೆಗೆ ಟೆಲಿಲೆನ್ಸ್ ದೂರದಲ್ಲಿರುವ ವಸ್ತುಗಳ ಅಥವಾ ಹಕ್ಕಿಗಳ ಛಾಯಾಚಿತ್ರೀಕರಣಕ್ಕೆ ಬಳಕೆಯಾಗುತ್ತವೆ.

ಕೇಂದ್ರೀಕರಣ

[ಬದಲಾಯಿಸಿ]

ಮಸೂರದಿಂದ ಒಂದು ನಿರ್ದಿಷ್ಟ ದೂರದಲ್ಲಿರುವ ವಸ್ತುವನ್ನು ಮಾತ್ರ ಸರಿಯಾಗಿ ಚಿತ್ರೀಕರಿಸಲು ಸಾಧ್ಯ. ಕ್ಯಾಮರದ ಮಸೂರವನ್ನು ಹಿಂದೆ ಮುಂದೆ ಮಾಡಿ ಚಿತ್ರ ಸ್ಫುಟವಾಗಿ ಮೂಡಿಬರುವಂತೆ ಮಾಡುವ ಪ್ರಕ್ರಿಯೆಗೆ ಕೇಂದ್ರೀಕರಣ ಅಥವಾ ಫೋಕಸಿಂಗ್ ಎಂದು ಹೆಸರು. ಇದರಲ್ಲಿ ಹಲವು ವಿಧಗಳಿವೆ. ಸರಳವಾದ ವಿಧಾನಕ್ಕೆ ಸ್ಥಿರ ಕೇಂದ್ರೀಕರಣ (fixed focusing) ಎಂದು ಹೆಸರು. ಸಿಂಗಲ್ ಲೆನ್ಸ್ ರಿಫ್ಲೆಕ್ಸ್ (ಎಸ್.ಎಲ್.ಆರ್) ಕ್ಯಾಮರಗಳಲ್ಲಿ ವಸ್ತುವನ್ನು ವ್ಯೂಫೈಂಡರ್ ಮೂಲಕ ನೋಡಿಕೊಂಡು ಮಸೂರವನ್ನು ಹಿಂದೆ ಮುಂದೆ ಚಲಿಸಿ ಚಿತ್ರ ಸ್ಫುಟವಾಗಿ ಬರುವಂತೆ ಮಾಡಬಹುದು. ಇತ್ತೀಚೆಗಿನ ಬಹುತೇಕ ಕ್ಯಾಮರಗಳಲ್ಲಿ ಈ ಫೋಕಸಿಂಗ್ ಕ್ರಿಯೆಯನ್ನು ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಕ್ಯಾಮರದಿಂದ ಹೊರಟ ಒಂದು ಬೆಳಕಿನ ಕಿರಣ ವಸ್ತುವಿಗೆ ಅಪ್ಪಳಿಸಿ ಅದು ಹಿಂತಿರುಗಿ ಬಂದಾಗ ಅದನ್ನು ಸ್ವೀಕರಿಸಿದ ಕ್ಯಾಮರ ಬೆಳಕಿನ ಕಿರಣ ತನ್ನಲ್ಲಿಂದ ಹೊರಟು ವಾಪಾಸು ಬರಲು ತೆಗೆದುಕೊಂಡ ಸಮಯವನ್ನು ಅಳೆದು ಅದನ್ನು ದೂರಕ್ಕೆ ಪರಿವರ್ತಿಸಿ ಅದಕ್ಕೆ ಸರಿಯಾಗಿ ಕ್ಯಾಮರದ ಮಸೂರವನ್ನು ಹೊಂದಾಣಿಕೆ ಮಾಡುತ್ತದೆ.

ಷಟ್ಟರ್

[ಬದಲಾಯಿಸಿ]

ಮಸೂರದ ಗಾತ್ರ ಮತ್ತು ವಸ್ತುವಿನ ಮೇಲೆ ಇರುವ ಬೆಳಕು ಎಷ್ಟು ಮಟ್ಟದ ಬೆಳಕನ್ನು ಕ್ಯಾಮರ ಒಳಗೆ ಬಿಡಬಹುದು ಎಂಬುದನ್ನು ನಿರ್ಧರಿಸುತ್ತವೆ. ಇದನ್ನೇ ಫೋಟೋಗ್ರಾಫಿಯ ಪರಿಭಾಷೆಯಲ್ಲಿ ಎಕ್ಸ್‍ಪೋಷರ್ ಎಂದು ಕರೆಯಲಾಗುತ್ತದೆ. ಇದನ್ನು ಹಚ್ಚು ಕಡಿಮೆ ಮಾಡಲು ಷಟ್ಟರ್ (ಕವಾಟ) ಅನ್ನು ಬಳಸಲಾಗುತ್ತದೆ. ಈ ಷಟ್ಟರ್‍ಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಮೊದಲನೆಯ ನಮೂನೆಯಲ್ಲಿ ಹಲವು ಎಲೆಗಳ ನಮೂನೆಯ ಕವಾಟ ಭಾಗಗಳು ವೇಗವಾಗಿ ತೆರೆದು ಮುಚ್ಚಿ ಮಾಡುತ್ತವೆ. ಈ ನಮೂನೆಯ ಷಟ್ಟರ್‍ನ ಒಂದು ಪ್ರಮುಖ ಬಾಧಕವೆಂದರೆ ಅತಿ ವೇಗದಲ್ಲಿ ಷಟ್ಟರ್ ತೆರೆದು ಮುಚ್ಚಿ ಮಾಡುವುದು ಕಷ್ಟ. ಇನ್ನೊಂದು ನಮೂನೆಯ ಷಟ್ಟರ್‍ನಲ್ಲಿ ಬಟ್ಟೆಯ ಎರಡು ಪರದೆಗಳು ಚಲಿಸುತ್ತಿರುತ್ತವೆ. ಈ ಎರಡು ಪರದೆಗಳ ಚಲನೆಯ ಸಮಯದಲ್ಲಿ ಇರುವ ಸ್ವಲ್ಪ ವ್ಯತ್ಯಾಸವು ಷಟ್ಟರ್ ವೇಗವನ್ನು ನಿಯಂತ್ರಿಸುತ್ತವೆ.

ಕ್ಯಾಮರ ನಮೂನೆಗಳು

[ಬದಲಾಯಿಸಿ]

ಕ್ಯಾಮರಗಳಲ್ಲಿ ಹಲವು ನಮೂನೆಗಳಿವೆ.

ಪ್ಲೇಟ್ ಕ್ಯಾಮರ

[ಬದಲಾಯಿಸಿ]

ಆರಂಭದ ಕಾಲದ ಕ್ಯಾಮರಗಳು ಈ ನಮೂನೆಯವಾಗಿದ್ದವು. ಅವುಗಳಲ್ಲಿ ಗಾಜಿನ ಪ್ಲೇಟ್ ಇರುತ್ತಿತ್ತು. ಈ ಪ್ಲೇಟ್ ಮೇಲೆ ಮಸೂರವು ಪ್ರತಿಬಿಂಬವನ್ನು ಮೂಡಿಸುತ್ತಿತ್ತು. ಚಿತ್ರವನ್ನು ಸಂಯೋಜನೆ ಮಾಡುವ ಸಮಯದಲ್ಲಿ ಛಾಯಾಚಿತ್ರಗ್ರಾಹಕನು ಇಡಿಯ ಕ್ಯಾಂರಕ್ಕೆ ಕಪ್ಪು ಬಟ್ಟೆ ಮುಚ್ಚಿ ಮಸೂರವನ್ನು ಮಾತ್ರ ತೆರೆದು ತಾನೂ ಆ ಬಟ್ಟೆಯ ಒಳಗೆ ನುಸುಳಿ ಫೋಕಸ್ ಮಾಡುತ್ತಿದ್ದ. ಫೋಕಸ್ ಸರಿಯಾದ ನಂತರ ಈ ಗಾಜಿ ಪ್ಲೇಟಿನ ಜಾಗದಲ್ಲಿ ಫೋಟೋಗ್ರಾಫಿಕ್ ಫಿಲ್ಮ್ ಇರುವ ತಟ್ಟೆಯನ್ನು ಇಟ್ಟು ಮಸೂರದ ಮುಚ್ಚಳವನ್ನು ತೆರೆದು ಹಾಕಿ ಮಾಡಿ ಛಾಯಾಚಿತ್ರ ಗ್ರಹಣ ಮಾಡುತ್ತಿದ್ದ.

ಬಾಕ್ಸ್ ಕ್ಯಾಮರ

[ಬದಲಾಯಿಸಿ]

ಈ ನಮೂನೆಯ ಕ್ಯಾಮರಗಳಲ್ಲಿ ಕೆಲವೇ ಕೆಲವು ನಿಯಂತ್ರಣಗಳಿದ್ದವು. ಅವುಗಳ ಮಸೂರಗಳು (ಲೆನ್ಸ್) ಹಿಂದೆ ಮುಂದೆ ಚಲಿಸುತ್ತಿರಲಿಲ್ಲ. ಫಿಲ್ಮ್ ಅನ್ನು ತಿರುಗಿಸಿ ಮುಂದಿನ ಚಿತ್ರಕ್ಕೆ ಹೋಗಲು ಒಂದು ಬುರುಡೆಯನ್ನು ತಿರುಗಿಸಬೇಕಿತ್ತು. ಹಲವು ಷಟ್ಟರ್ ವೇಗಗಳು ಇರುತ್ತಿರಲಿಲ್ಲ.

ವ್ಯೂಫೈಂಡರ್ ಕ್ಯಾಮರ

[ಬದಲಾಯಿಸಿ]

ಈ ನಮೂನೆಯ ಕ್ಯಾಮರಗಳಲ್ಲಿ ಬಾಕ್ಸ್ ಕ್ಯಾಮರ ಮಾದರಿಯಲ್ಲೇ ಚಿತ್ರೀಕರಣಕ್ಕೆ ಒಂದು, ಕಣ್ಣಿನಲ್ಲಿ ನೋಡಲು ಇನ್ನೊಂದು ಮಸೂರ ಇರುತ್ತವೆ. ವ್ಯೂಫೈಂಡರ್ ಮೂಲಕ ನೋಡಿಕೊಂಡು ದೃಶ್ಯವನ್ನು ಸರಿಹೊಂದಿಸಿಕೊಂಡು ಕ್ಲಿಕ್ ಬಟನ್ ಅನ್ನು ಒತ್ತುವ ಮೂಲಕ ಛಾಯಾಚಿತ್ರೀಕರಣ ಮಾಡಲಾಗುತ್ತದೆ. ಈ ನಮೂನೆಯ ಕ್ಯಾಮರಗಳ ಮಸೂರವನ್ನು ಹಿಂದೆ ಮುಂದೆ ಚಲಿಸಿ ಚಿತ್ರ ಫಿಲ್ಮಿನ ಮೇಲೆ ಸ್ಫುಟವಾಗಿ ಮೂಡಿಬರುವಂತೆ ಮಾಡಬಹುದು. ಮಸೂರ ಹಿಂದೆ ಮುಂದೆ ಚಲಿಸಿದಾಗ ವ್ಯೂಫೈಂಡರ್‍ನ ಸಂಯೋಜನೆಯೂ ಅದಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ದೃಶ್ಯವನ್ನು ತೋರಿಸುತ್ತದೆ. ಆದರೂ ವ್ಯೂಫೈಂಡರ್‍ನಲ್ಲಿ ಕಾಣಿಸುವ ದೃಶ್ಯಕ್ಕೂ ಅಂತಿಮವಾಗಿ ಮೂಡಿಬರುವ ಚಿತ್ರಕ್ಕೂ ಸ್ವಲ್ಪ ವ್ಯತ್ಯಾಸ ಇರುತ್ತದೆ.

ಎಸ್.ಎಲ್.ಆರ್. ಕ್ಯಾಮರ

[ಬದಲಾಯಿಸಿ]

ಎಸ್.ಎಲ್.ಆರ್. ಎಂದರೆ ಸಿಂಗಲ್ ಲೆನ್ಸ್ ರಿಫ್ಲೆಕ್ಸ್. ಈ ನಮೂನೆಯ ಕ್ಯಾಮರಗಳಲ್ಲಿ ಚಿತ್ರೀಕರಣಕ್ಕೂ ದೃಶ್ಯವನ್ನು ನೋಡುವುದಕ್ಕೂ ಒಂದೇ ಮಸೂರ (ಲೆನ್ಸ್) ಇರುತ್ತದೆ. ಮಸೂರದ ಹಿಂದೆ ೪೫ ಡಿಗ್ರಿ ಕೋನದಲ್ಲಿ ಒಂದು ಕನ್ನಡಿ ಇರುತ್ತದೆ. ದೃಶ್ಯವನ್ನು ಸಂಯೋಜಿಸುವಾಗ ಕನ್ನಡಿ ಅದರ ಜಾಗದಲ್ಲಿ ಇರುತ್ತದೆ. ಕ್ಲಿಕ್ ಮಾಡುವಾಗ ಕನ್ನಡಿ ಮೇಲಕ್ಕೆ ಹೋಗಿ ಬೆಳಕು ಫಿಲ್ಮ್ ಮೇಲೆ ಬಿದ್ದು ಪ್ರತಿಬಿಂಬವನ್ನು ಮೂಡಿಸುತ್ತದೆ. ಈ ನಮೂನೆಯ ಕ್ಯಾಮರಗಳಲ್ಲಿ ನಿಖರವಾಗಿ ಫೋಕಸಿಂಗ್ ಮಾಡಬಹುದು ಮಾತ್ರವಲ್ಲ ಬೇರೆ ಬೇರೆ ಮಸೂರಗಳನ್ನು ಜೋಡಿಸಬಹುದು.

ಡಿಜಿಟಲ್ ಕ್ಯಾಮರ

[ಬದಲಾಯಿಸಿ]
ಕ್ಯಾನನ್ ಪವರ್‌ಶಾಟ್ ಎ 95 ನ ಮುಂಭಾಗ ಮತ್ತು ಹಿಂಭಾಗ, ಒಂದು ಸಾಮಾನ್ಯ ಪಾಕೆಟ್ ಗಾತ್ರದ; ಕಾಂಪ್ಯಾಕ್ಟ್ ಡಿಜಿಟಲ್ ಕ್ಯಾಮೆರಾ

ಕ್ಯಾಮರದಲ್ಲಿ ಫಿಲ್ಮ ಬದಲಿಗೆ ಇಲೆಕ್ಟ್ರಾನಿಕ್ ಸಂವೇದಕ ಇದ್ದರೆ ಅದು ಡಿಜಿಟಲ್ ಕ್ಯಾಮರ ಎನಿಸಿಕೊಳ್ಳುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಎರಡು ನಮೂನೆ - ಏಮ್-ಆಂಡ್-ಶೂಟ್ ಮತ್ತು ಡಿ.ಎಸ್‌.ಎಲ್‌.ಆರ್. ಕ್ಯಾಮರಗಳು. ಪ್ರತಿಬಿಂಬವನ್ನು ಗ್ರಹಿಸುವ ಇಲೆಕ್ಟ್ರಾನಿಕ್ ಸಂವೇದಕಗಳಲ್ಲಿ ಸಿ.ಸಿ.ಡಿ. ಮತ್ತು ಸಿ.ಎಂ.ಓ.ಎಸ್. ಎಂಬ ಎರಡು ನಮೂನೆಗಳಿವೆ. ಗ್ರಹಿಸಿದ ಪ್ರತಿಬಂಬವನ್ನು ಮೆಮೊರಿ ಕಾರ್ಡ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ನಂತರ ಅದನ್ನು ಗಣಕಕ್ಕೆ ವರ್ಗಾಯಿಸಬಹುದು.

ಏಮ್-ಆಂಡ್-ಶೂಟ್ ಡಿಜಿಟಲ್ ಕ್ಯಾಮರ

[ಬದಲಾಯಿಸಿ]

ಏಮ್-ಆಂಡ್-ಶೂಟ್ ಡಿಜಿಟಲ್ ಕ್ಯಾಮರಗಳಲ್ಲಿ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ವಸ್ತು ಅಥವಾ ದೃಶ್ಯದ ಕಡೆ ಕ್ಯಾಮರವನ್ನು ಹಿಡಿದು ಕ್ಯಾಮರದ ಎಲ್.ಸಿ.ಡಿ. ಮೋನಿಟರ್‍ನಲ್ಲಿ ನೋಡಿಕೊಂಡು ಕ್ಲಿಕ್ ಮಾಡಿದರೆ ಆಯಿತು. ಅಲ್ಲ ಆಯ್ಕೆಗಳನ್ನು ಕ್ಯಾಮರವೇ ಮಾಡುತ್ತದೆ. ಈ ನಮೂನೆಯ ಕ್ಯಾಮರಗಳಲ್ಲಿ ಮಸೂರ (ಲೆನ್ಸ್) ಬದಲಾಯಿಸಲು ಆಗುವುದಿಲ್ಲ.

ಡಿ.ಎಸ್‌.ಎಲ್‌.ಆರ್. ಕ್ಯಾಮರ

[ಬದಲಾಯಿಸಿ]

ಎಸ್.ಎಲ್.ಆರ್. ಕ್ಯಾಮರಗಳಲ್ಲಿ ಪ್ರತಿಬಿಂಬವನ್ನು ಫಿಲ್ಮ್ ಮೇಲೆ ಮೂಡಿಸಲಾಗುತ್ತದೆ. ಫಿಲ್ಮ್ ಜಾಗದಲ್ಲಿ ಇಲೆಕ್ಟ್ರಾನಿಕ್ ಸಂವೇದಕ ಇದ್ದರೆ ಅದು ಡಿ.ಎಸ್‌.ಎಲ್‌.ಆರ್. ಕ್ಯಾಮರ ಎನಿಸಿಕೊಳ್ಳುತ್ತದೆ. ಹೆಚ್ಚಿನ ವಿವರಗಳಿಗೆ ಡಿಎಸ್‌ಎಲ್‌ಆರ್ ಕ್ಯಾಮರ ಲೇಖನ ಓದಬಹುದು.

ಉಲ್ಲೇಖ

[ಬದಲಾಯಿಸಿ]
  1. Geoffrey, Batchen. Burning with Desire: The Conception of Photography. Cambridge, MA, MIT Press. ISBN 0-262-52259-4.
  2. Gustavson, Todd. Cameras: 170 Years of Photographic Innovation. Toronto, Ontario: Sterling Publishing, Inc. ISBN 978-1-4027-8086-8.
  3. Hirsch, Robert. Seizing the Light: A History of Photography. New York: McGraw-Hill Companies, Inc. ISBN 0-697-14361-9.
  4. Gernsheim, Helmut. A Concise History of Photography (3 ed.). Mineola, New York: Dover Publications, Inc. ISBN 0-486-25128-4.
  5. ಚಿತ್ರಬ್ರಹ್ಮ’ನ ಹೆಜ್ಜೆ ಜಾಡು ಹಿಡಿದು...;ಟಿ. ಕೆಂಪಣ್ಣ;d: 18 ಆಗಸ್ಟ್ 2019
"https://kn.wikipedia.org/w/index.php?title=ಕ್ಯಾಮರ&oldid=930036" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy