ಪಿ ಹೆಚ್
ಪಿ ಹೆಚ್ ಎಂಬುದು ಒಂದು ದ್ರವದ ಆಮ್ಲೀಯತೆ ಅಳತೆ ಮಾಡಲು ಉಪಯೋಗಿಸುವ ಮಾಪಕ. ಇದನ್ನು ಹೆಚ್ಚಾಗಿ ರಸಾಯನಶಾಸ್ತ್ರದಲ್ಲಿ ಬಳಸಲಾಗುತ್ತದೆ.
‘ಮೆಟಬಾಲಿಸಮ್’ (ಉಪಾಪಚಯ) ಪ್ರಕ್ರಿಯೆ ನಿರ್ದಿಷ್ಟ ಪ್ರಮಾಣದಲ್ಲಿ ನಡೆಯುವುದು ಆರೋಗ್ಯವಂತ ದೇಹದ ಪ್ರಧಾನ ಲಕ್ಷಣ. ಇದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಸಾಮಾನ್ಯವಾಗಿ ನಾಡಿಮಿಡಿತ, ಉಷ್ಣತೆ, ರಕ್ತದೊತ್ತಡ, ರಕ್ತ ಅಥವಾ ಮೂತ್ರದಲ್ಲಿನ ಸಕ್ಕರೆ ಮುಂತಾದ ಅಂಶಗಳನ್ನು ಪರಿಶೀಲಿಸುತ್ತಾರೆ. ಹಾಗೆಯೇ ಕೆಲವೊಂದು ಸಂದರ್ಭಗಳಲ್ಲಿ ದೇಹ ಹೊರಸೂಸುವ ಬೆವರು ಅಥವಾ ಮೂತ್ರವು ಆಮ್ಲೀಯವಾಗಿದೆಯೊ ಅಥವಾ ಕ್ಷಾರೀಯವಾಗಿದೆಯೊ ಎಂಬ ಅಂಶಗಳನ್ನೂ ಗಣನೆ ಮಾಡಬೇಕಾಗುತ್ತದೆ. ಇದರ ಮಾನಕದ ಹೆಸರು ‘ಪಿಎಚ್ - pH (potential of Hydrogen)'. ಉದಾಹರಣೆಗೆ ಆಮ್ಲ ಅಥವಾ ಕ್ಷಾರ ಗುಣದಲ್ಲಿ ತಟಸ್ಥವಾಗಿರುವ ಶುದ್ಧ ನೀರಿನ ‘ಪಿಎಚ್’ ಅಳತೆ 7.[೧] ‘ಪಿಎಚ್’ 7ಕ್ಕಿಂತಲೂ ಕಡಿಮೆಯಾದರೆ ದ್ರವ ಆಮ್ಲೀಯ ಗುಣ ಪಡೆಯುತ್ತದೆ. ಅಂತೆಯೇ ‘ಪಿಎಚ್’ 7ಕ್ಕಿಂತಲೂ[೨] ಹೆಚ್ಚಿದ್ದರೆ ದ್ರವ ಕ್ಷಾರೀಯ ಗುಣ ಪಡೆಯುತ್ತದೆ. ಈ ಬಗೆಯ ಜೀವರಾಸಾಯನಿಕ ಗುಣಲಕ್ಷಣಗಳನ್ನು ‘ಥಟ್ಟೆಂದು ಹೇಳಲು’ ಸಾಧ್ಯವಿಲ್ಲ. ಪ್ರಯೋಗಶಾಲೆಯಲ್ಲಿನ ಸೂಕ್ಷ್ಮ ಪರಿಶೀಲನೆಯಲ್ಲಿ ಮಾತ್ರ ಅಳತೆ ಮಾಡಬಹುದು. ನಮಗ್ಯಾರಿಗೂ ಈ ಬಗೆಯ ಅಂಕೆ-ಅಂಶಗಳು ಸಾಮಾನ್ಯವಾಗಿ ಬೇಕಾಗುವುದಿಲ್ಲ. ತಿಳಿದುಕೊಂಡರೂ ಯಾವ ಅಂಶಗಳು ಯಾವ ಬಗೆಯ ಪರಿಣಾಮಗಳನ್ನು ಮಾಡುತ್ತವೆ ಅಥವಾ ದೇಹದ ಆರೋಗ್ಯ ಸ್ಥಿತಿ ಹೇಗಿದೆ ಎಂಬುದು ಮನದಟ್ಟಾಗುವುದಿಲ್ಲ.