ವಿಷಯಕ್ಕೆ ಹೋಗು

ಹೆಣಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಣಿಗೆ ಮತ್ತು ಮೂಲಭೂತ ಹೊಲಿಗೆಗಳ ಪ್ರಾತ್ಯಕ್ಷಿಕೆ.

ಹೆಣಿಗೆ ಎಂದರೆ ವಿಶೇಷ ಬಗೆಯ ಕಡ್ಡಿಗಳ ಸಹಾಯದಿಂದ, ದಾರವನ್ನು ಬಳಸಿ, ಹಿಂಜಿದಂತೆ, ಸಡಿಲವಾಗಿದ್ದರೂ ಸ್ಥಿತಿಸ್ಥಾಪಕಗುಣವುಳ್ಳ ಒಂದು ಬಗೆಯ ವಸ್ತ್ರ ತಯಾರಿಕೆಯ ವಿಧಾನ (ನಿಟ್ಟಿಂಗ್). ಸಾಮಾನ್ಯವಾಗಿ ಹೆಣಿಗೆಯಲ್ಲಿ ಸರಪಳಿಯಂತೆ ಗಂಟುಹಾಕುತ್ತ ಹೋಗುವ ಕ್ರಮವಿರುತ್ತದೆ. ಒಂದು ಗಂಟು ಬಿಚ್ಚಿಹೋದರೆ ಇಡೀ ಹೆಣಿಗೆ ಬಿಚ್ಚಿಕೊಳ್ಳುವ ಸಾಧ್ಯತೆಯೇ ಇಲ್ಲಿ ಹೆಚ್ಚು. ನಿಟ್ಟಿಂಗ್ ಎಂಬ ಇಂಗ್ಲಿಷ್ ಪದ ಆಂಗ್ಲೋ ಸ್ಯಾಕ್ಸನ್ ಮೂಲದ್ದು. ಆ ಭಾಷೆಯಲ್ಲಿ ನಿಟ್ಟಿಂಗ್ ಎಂದರೆ ಕಟ್ಟು ಅಥವಾ ಗಂಟು ಹಾಕು ಎಂದರ್ಥವಿದೆ.

ಹೆಣಿಗೆಯ ಇತಿಹಾಸ ಅತ್ಯಂತ ಪ್ರಾಚೀನವಾದದ್ದು. ಹುಲ್ಲಿನ ಚಾಪೆ, ಮಂದಲಿಕೆ ಮೊದಲಾದವುಗಳ ಹೆಣಿಗೆ ಅನಂತರ ದಾರದ ಹೆಣಿಗೆಗೆ ಮೂಲವಾಗಿರಬೇಕು. ಹೆಣಿಗೆಯಲ್ಲಿ ಎರಡು ಬಗೆಗಳಿವೆ. ಕೈ ಹೆಣಿಗೆ ಮತ್ತು ಯಂತ್ರದ ಹೆಣಿಗೆ. ಕೈ ಹೆಣಿಗೆಯನ್ನು ವೆಫ್ಟ್ ನಿಟ್ಟಿಂಗ್ ಎಂದೂ ಯಂತ್ರದ ಹೆಣಿಗೆಯನ್ನು ವಾರ್ಪ್ ನಿಟ್ಟಿಂಗ್ ಎಂದೂ ಕರೆಯಲಾಗುತ್ತದೆ. ಕೈ ಹೆಣಿಗೆಗೆ ದಾರ ಮತ್ತು ಹೆಣಿಗೆ ಕಡ್ಡಿ ಅಗತ್ಯ. ಹೆಣಿಗೆ ಕಡ್ಡಿಗಳನ್ನು ಮರ, ಉಕ್ಕು, ಪ್ಲಾಸ್ಟಿಕ್, ದಂತ, ಸೆಲ್ಯುಲಾಯ್ಡ್ ಮೊದಲಾದ ವಸ್ತುಗಳಿಂದ ತಯಾರಿಸಲಾಗುತ್ತದೆ. ಕಡ್ಡಿಗಳು ಸುಮಾರು ಅರ್ಧದಿಂದ ಒಂದು ಅಡಿ ಉದ್ದವಿದ್ದು ಎರಡೂ ತುದಿಗಳು ಚೂಪಾಗಿರಬಹುದು ಅಥವಾ ಒಂದು ತುದಿ ಚೂಪಾಗಿದ್ದು ಇನ್ನೊಂದು ತುದಿ ಮೊಂಡಾಗಿರ ಬಹುದು. ಹೆಣಿಗೆ ಕಡ್ಡಿಗಳಲ್ಲಿಯೂ ನಾಲ್ಕಾರು ಬಗೆಗಳಿವೆ. ದೊಗಲೆ ಹೆಣಿಗೆಗೆ ದಪ್ಪಕಡ್ಡಿ ಮತ್ತು ದಪ್ಪದಾರ ಬಳಸಿದರೆ, ಬಿಗಿ ಹೆಣಿಗೆಗೆ ತೆಳು ಕಡ್ಡಿ ಮತ್ತು ತೆಳುದಾರ ಬಳಸುಲಾಗುತ್ತದೆ. ಹೆಣಿಗೆಯ ಕೆಲಸಕ್ಕೆ ಎರಡು ಕಡ್ಡಿಗಳು ಸಾಕು. ಕೆಲವೊಂದು ವಸ್ತ್ರಗಳ ಹೆಣಿಗೆಯಲ್ಲಿ ಮೂರು ಅಥವಾ ನಾಲ್ಕು ಕಡ್ಡಿಗಳನ್ನು ಉಪಯೋಗಿಸಲಾಗು ತ್ತದೆ. ಸಾಮಾನ್ಯ ಹೆಣಿಗೆಯ ಗಂಟನ್ನು ನಿಟ್ ಮತ್ತು ಪರ್ಲ್ ಎಂದು ಕರೆಯುತ್ತಾರೆ. ಉಳಿದ ಎಲ್ಲ ಬಗೆಯ ಹೆಣಿಗೆಯ ಗಂಟುಗಳೂ ಇವುಗಳ ಅಲ್ಪಸ್ವಲ್ಪ ಬದಲಾವಣೆ ಎನ್ನಬಹುದು. ಕೈಹೆಣಿಗೆಯಲ್ಲಿ ಮಾತ್ರ ನಾನಾ ನಮೂನೆಗಳ ರಚನೆ ಸಾಧ್ಯ. ಆದರೆ ಈಗ ಯಂತ್ರ ಹೆಣಿಗೆಯಲ್ಲಿಯೂ ಕೈಹೆಣಿಗೆಯ ನಮೂನೆಗಳನ್ನು ಸೃಷ್ಟಿಸಲಾಗುತ್ತಿದೆ. ಸ್ವೆಟರ್, ಮಫ್ಲರ್, ಕಾಲುಚೀಲ, ಕೈಚೀಲ, ಪರದೆ ಮುಂತಾದವು ಪ್ರಮುಖ ಹೆಣಿಗೆಯ ವಸ್ತುಗಳು. ಹೆಣಿಗೆಯಂತ್ರವನ್ನು ಇಂಗ್ಲೆಂಡ್‍ನ ನಾಟ್ಟಿಂಗ್‍ಹ್ಯಾಮ್ ಫೈರ್‍ನ ವಿಲಿಯಮ್ ಲೀ ಎಂಬಾತ 1589ರಲ್ಲಿ ಕಂಡುಹಿಡಿದನೆಂದು ತಿಳಿದುಬರುತ್ತದೆ. ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಲಭ್ಯವಿರುವುದು ಯಂತ್ರ ಹೆಣಿಗೆಯ ವಸ್ತುಗಳೇ.

ಉಣ್ಣೆಯ ಹೆಣಿಗೆ

[ಬದಲಾಯಿಸಿ]

ಹೆಣಿಗೆಯಲ್ಲಿ ಉಣ್ಣೆಯ ಹೆಣಿಗೆ ತುಂಬ ವಿಶಿಷ್ಟವಾದದ್ದು. ಇದರ ಪ್ರಾಮುಖ್ಯ ಚಳಿಪ್ರದೇಶಗಳಲ್ಲಿ ಹೆಚ್ಚು. ಉಣ್ಣೆಯ ಹೆಣಿಗೆ ಮೊದಲು ಸ್ಕಾಟ್ಲೆಂಡ್‍ನಲ್ಲಿ ಆರಂಭವಾಗಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ಉಣ್ಣೆಯ ಹೆಣಿಗೆ ಸುಲಭವಾದುದು; ಕೈ ಕಸೂತಿಯಂತೆ ಅಷ್ಟು ಸೂಕ್ಷ್ಮವಾದದ್ದಲ್ಲ. ಹೆಣಿಗೆಯ ಮಾಹಿತಿ ತಿಳಿದಿದ್ದರೆ ಸಾಕು. ಹೆಣೆಯಲು ಮುಖ್ಯವಾಗಿ ಬೇಕಾದುದು ಉಣ್ಣೆಯ ದಾರ ಹಾಗೂ ಹೆಣಿಗೆಯ ಕಡ್ಡಿಗಳು. ಉಣ್ಣೆಯನ್ನು ಕೊಳ್ಳಬೇಕಾದಾಗ ಬಹಳ ಜಾಗರೂಕತೆ ವಹಿಸಬೇಕು. ಉಣ್ಣೆಯ ದಾರದಲ್ಲಿ ಹಲವಾರು ಬಗೆಗಳಿವೆ. ಎರಡು ಪ್ಲಯ್, ಮೂರು ಪ್ಲಯ್, ನಾಲ್ಕು ಪ್ಲಯ್, ಡಬ್ಬಲ್ ನಿಟ್ಟೆಡ್ ಉಣ್ಣೆ-ಹೀಗೆ ತರತರದ ಉಣ್ಣೆಯ ಲಡಿಗಳೂ ಸುತ್ತಿ ಸಿದ್ಧವಾಗಿಟ್ಟಿರುವ ಮೃದುವಾದ ಉಣ್ಣೆಯೂ ದೊರೆಯುತ್ತದೆ. ಚಿಕ್ಕವರಿಗಾದರೆ 2 ಪ್ಲಯ್ ಅಥವಾ ಬೇಬಿ ಉಲ್ ಕೊಂಡುಕೊಳ್ಳ ಬಹುದು. ದೊಡ್ಡವರಿಗಾದರೆ 3 ಪ್ಲಯ್ ಅಥವಾ ಡಬ್ಬಲ್ ನಿಟ್ಟೆಡ್ ಉಣ್ಣೆಬೇಕಾಗುತ್ತದೆ. ಸಾಧ್ಯವಾದಷ್ಟು ಅಗಲಕ್ಕೂ ಉದ್ದಕ್ಕೂ ಹೆಚ್ಚು ಹಿಗ್ಗುವಂಥ ಗುಂಜು ಗುಂಜಾಗಿರದ ಉಣ್ಣೆ ಉತ್ಕøಷ್ಟವಾದದ್ದೆಂದು ಪರಿಗಣಿಸಬೇಕು.

ಹೆಣಿಗೆಯ ಪ್ರಾರಂಭದಲ್ಲಿ ಉಣ್ಣೆಯ ಲಡಿಗಳನ್ನು ಸುತ್ತುವುದೂ ಒಂದು ಜಾಣತನ. ಉಣ್ಣೆ ಸ್ವಲ್ಪವೂ ಹಿಗ್ಗದ ಹಾಗೆ ಹಗುರವಾಗಿ ಬೆರಳುಗಳನ್ನು ಮಧ್ಯದಲ್ಲಿಟ್ಟು ಹೂವಿನಹಾಗೆ ಮೃದುವಾಗಿ ಸುತ್ತಿಡಬೇಕು. ಅನಂತರ ಉಣ್ಣೆಗೆ ತಕ್ಕಂತೆ ಕಡ್ಡಿಗಳನ್ನು ಹಾಗೂ ನಮೂನೆಯನ್ನು ಆರಿಸಬೇಕು. ದಪ್ಪ ಉಣ್ಣೆಗೆ ಸಾಧ್ಯವಾದಷ್ಟು ದಪ್ಪ ಕಡ್ಡಿ, ಅಂದರೆ ಕಡಿಮೆ ನಂಬರಿನ ಕಡ್ಡಿ ಉಪಯೋಗಿಸಬೇಕು. ಕಡ್ಡಿಗಳಲ್ಲಿ ಸುಮಾರು 3-4ರಿಂದ 24-25ರ ವರೆಗೆ ನಂಬರುಗಳಿರುವುವು. ನಂಬರ್ ಕಡಿಮೆ ಆದಂತೆ ಕಡ್ಡಿ ದಪ್ಪವಾಗುತ್ತ ಹೋಗುವುದು. ಸ್ವೆಟರ್ ಹೆಣೆಯುವಾಗ ಅಂಚಿಗೆ ಹಾಗೂ ಕತ್ತಿನ ತೋಳಿನ ಪಟ್ಟಿಗೆ ಸಣ್ಣ ಕಡ್ಡಿಗಳನ್ನು, ಒಳಮೈಗೆ ದಪ್ಪ ಕಡ್ಡಿಯನ್ನು ಉಪಯೋಗಿಸಬೇಕು. ಉದಾ: ಅಂಚನ್ನು ಹೆಣೆಯಲು 9 ನಂಬರಿನ ಕಡ್ಡಿಯಾದರೆ ಒಳಮೈಯನ್ನು ಹೆಣೆಯಲು 11 ನಂಬರಿನ ಕಡ್ಡಿಯನ್ನು ಉಪಯೋಗಿಸಬೇಕು.

ಉಣ್ಣೆ ಹಾಗೂ ಕಡ್ಡಿ ಸಿದ್ಧವಾದ ಮೇಲೆ ಹೆಣೆಯುವ ಮೊದಲು ಇನ್ನೊಂದು ವಿಷಯವನ್ನು ಗಮನದಲ್ಲಿಡಬೇಕು. ಅದು ಹೆಣಿಗೆಯ ಸರಿಯಾದ ಉದ್ದಳತೆ. ಸುಮಾರು ಒಂದು ಇಂಚು ಅಗಲ ಹಾಗೂ ಒಂದು ಇಂಚು ಉದ್ದ ಹೆಣಿಗೆ ಬರಬೆಕಾದರೆ ಎಷ್ಟು ಮನೆಗಳನ್ನು ಹಾಕಿದರೆ ಈ ಅಳತೆ ದೊರೆಯುವುದೆಂದು ತಿಳಿದು ಆ ಪ್ರಕಾರ ಮನೆಗಳನ್ನು ಎಣಿಸಿ ನೋಡಿ ಪ್ರಾರಂಭಿಸಬೇಕು. ಹೆಣಿಗೆ ಬಹಳ ಬಿಗಿ ಇರಬಾರದು. ಕಡ್ಡಿಗಳು ದಾರದ ಮನೆಗಳ ಮಧ್ಯೆ ಸರಾಗವಾಗಿ ಓಡಾಡಬೇಕು. ಹೀಗೆ ಕ್ರಮಬದ್ಧವಾಗಿ ಹೆಣೆದರೆ ಉಣ್ಣೆಯ ಉಡುಪುಗಳು ಅಂದವಾಗಿಯೂ ಆಕರ್ಷಣೀಯವಾಗಿಯೂ ಇರುವುವು.

ಉಣ್ಣೆಯ ಹೆಣಿಗೆಯಲ್ಲಿ ಸಾಧಾರಣ ಹೆಣಿಗೆ, ಜೇನುಗೂಡಿನ ಹೆಣಿಗೆ, ನಾಗರಹಾವಿನ ಹೆಣಿಗೆ, ಕೇದಿಗೆಯ ಹೆಣಿಗೆ-ಹೀಗೆ ಅನೇಕ ನಮೂನೆಗಳಿವೆ. ಚಳಿಗಾಲದ ಉಣ್ಣೆಯ ಉಡುಪಿಗೆ ಜಾಳಿನ ಅಥವಾ ದೊಡ್ಡ ದೊಡ್ಡ ಕಣ್ಣುಗಳ ಹೆಣಿಗೆಯನ್ನು ಹಾಕಬಾರದು; ಸಾದಾ ಬಿಗಿ ಹೆಣಿಗೆಯನ್ನು ಹಾಕಬೇಕು.

ಉಣ್ಣೆ ಹೆಣಿಗೆಯಲ್ಲಿ ಹಲವಾರು ವಿಷಯಗಳನ್ನು ಜ್ಞಾಪಕದಲ್ಲಿಟ್ಟು ಕೊಳ್ಳಬೇಕು. ಉಣ್ಣೆ ಕೊಳೆಯಾಗದಿರಲು ಕೈಗಳು ಸದಾ ಶುಭ್ರವಾಗಿರ ಬೆಕು. ಮಧ್ಯ ಸಾಲುಗಳಲ್ಲಿ ಉಣ್ಣೆದಾರ ಮುಗಿದರೆ ಸಾಧ್ಯವಾದಷ್ಟು ಜೋಡಿಸುವ ಗಂಟು ಕೊನೆಯಲ್ಲಿ ಬರುವಂತೆ ನೋಡಿಕೊಳ್ಳಬೇಕು. ನಮೂನೆಯನ್ನು ಕೆಡಿಸದೆ ಹೆಣೆಯಬೇಕು. ಉಣ್ಣೆಯನ್ನು ಯಾವ ಕಾರಣಕ್ಕಾಗಲೀ ಪುನ: ಪುನ: ಬಿಚ್ಚುವುದಾಗಲೀ ಜಗ್ಗುವುದಾಗಲೀ ಮಾಡಬಾರದು. ಹೆಣಿಗೆ ಮುಗಿದಮೇಲೆ, ಬೇರೆ ಬೇರೆ ಭಾಗಗಳನ್ನು ಮೃದುವಾಗಿ ಇಸ್ತ್ರೀ ಹಾಕಿ ಸರಿಯಾಗಿ ಜೋಡಿಸಿ ಹೊಲಿಯಬೇಕು. ಚಿಕ್ಕಮಕ್ಕಳ ಉಡುಪಿಗೆ ಒಪ್ಪುವ ಅಲಂಕಾರ ಬಿರಡಿಗಳನ್ನು ಹಾಕಬಹುದು. ಆ ಬಿರಡಿಗಳು ಬಣ್ಣಕ್ಕೆ ಅನುಗುಣವಾಗಿರಬೇಕು. ಉಣ್ಣೆಯ ಹೆಣಿಗೆಯ ಬಟ್ಟೆಗಳನ್ನು ಬಿಸಿನೀರಿನಲ್ಲಿ ತೊಳೆಯಬಾರದು. ತೊಳೆಯುವಾಗ್ಗೆ ಕಲ್ಲಿಗೆ ಅಪ್ಪಳಿಸುವುದಾಗಲೀ ತಿಕ್ಕುವುದಾಗಲೀ ಕೂಡದು. ಸೋಪುನೀರಿನ ಮಿಶ್ರಣದಲ್ಲಿ ಮೃದುವಾಗಿ ತಿಕ್ಕಿ ಹಿಂಡದೇ ಹಾಗೆಯೇ ಒಣಹಾಕಬೇಕು. ಹೀಗೆ ಮಾಡಿದರೆ ಹೆಣಿಗೆಯ ಆಕಾರ ಕೆಡುವುದಿಲ್ಲ. ಇಂಥ ನಾಜೂಕಿನ ಕ್ರಮಗಳನ್ನು ಅನುಸರಿಸಿದರೆ ಉಣ್ಣೆಯ ಹೆಣಿಗೆಯ ಉಡುಪುಗಳು ದೀರ್ಘಬಾಳಿಕೆ ಬರುವುವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • craftyarncouncil.com, Relationship between yarn weight and knitting gauge.
  • US and UK Conversion Chart Archived 2010-05-28 ವೇಬ್ಯಾಕ್ ಮೆಷಿನ್ ನಲ್ಲಿ. Shows US and UK conversion charts, relationship to needle size and typical usage.
  • "Knitting". Fashion, Jewellery & Accessories. Victoria and Albert Museum. Retrieved 2007-09-22.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹೆಣಿಗೆ&oldid=1244777" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy